ಮಂಡ್ಯ,ಆ.11: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲಾಕ್ ತುಂಡಾಗಿರುವ ಬಗ್ಗೆ ಕಳವಳ ಪಟ್ಟರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಇದು ಸರ್ಕಾರದ ನಿರ್ಲಕ್ಷ್ಯ ದಿಂದ ಆದುದಲ್ಲ ಎಂದು ಹೇಳಿದ್ದಾರೆ.
ಜತೆಗೆ ರಾಜ್ಯ ಸರಕಾರಕ್ಕೆ ಸಲಹೆ ಕೂಡಾ ನೀಡಿದ್ದು,ಕೆಆರ್ ಎಸ್ ಸೇರಿದಂತೆ ರಾಜ್ಯದ ಎಲ್ಲಾ ಜಲಾಶಯಗಳ ಕ್ರಸ್ಟ್ ಗೇಟ್ ಗಳ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡುವಂತೆ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರದಲ್ಲಿ ಭತ್ತ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಲಾಕ್ ಕಟ್ ವಿಚಾರ ಅತ್ಯಂತ ಕಳವಳಕಾರಿಯಾಗಿದೆ, 19ನೇ ಕ್ರಸ್ಟ್ ಗೇಟ್ ತೆರೆದುಕೊಂಡು ಭಾರೀ ಪ್ರಮಾಣದ ನೀರು ಹರಿದು ಹೋಗುತ್ತಿದೆ, ಒಳ್ಳೆಯ ಮಳೆಯಾಗಿ ಜಲಾಶಯ ತುಂಬಿತ್ತು. ಈ ನೀರನ್ನೇ ನಂಬಿಕೊಂಡಿದ್ದ ರೈತರಿಗೆ ತೊಂದರೆ ಆಗಿದೆ ಎಂದು ಬೇಸರ ಪಟ್ಟರು.
70 ವರ್ಷಗಳ ಹಿಂದೆಯೇ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಹಿಂದೆಯೂ ಅಲ್ಲಿ ಅನೇಕ ಸಮಸ್ಯೆಗಳು ಬೆಳಕಿಗೆ ಬಂದಿದ್ದವು. ನಾರಾಯಣಪುರ, ಆಲಮಟ್ಟಿ ಅಣೆಕಟ್ಟುಗಳಲ್ಲಿ ಸ್ಟಾಪ್ ಲಾಕ್ ಗೇಟ್ ಅಳವಡಿಸಲಾಗಿದೆ.
ತುಂಗಭದ್ರಾ ಅಣೆಕಟ್ಟೆಯಲ್ಲಿ ಸ್ಟಾಪ್ ಲಾಕ್ ಗೇಟ್ ಅಳವಡಿಕೆ ಮಾಡಿಲ್ಲ,ಹಾಗಾಗಿ ನೀರು ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯ ಪಟ್ಟರು.
ಟಿಬಿ ಡ್ಯಾಂ ಬೋರ್ಡ್ ಟೆಕ್ನಿಕಲ್ ವಿಚಾರದಲ್ಲಿ ಕಾಟಚಾರದ ವರದಿ ಕೊಟ್ಟಿವೆ,ಆದ್ದರಿಂದಲೇ ಇಂತಹ ಪರಿಸ್ಥಿತಿ ಬಂದಿದೆ. ಇದನ್ನು ಕೂಡಲೇ ಸರಿ ಪಡಿಸಿಕೊಳ್ಳಬೇಕಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಕೃಷ್ಣರಾಜ ಸಾಗರ (ಕೆಆರ್‌ಎಸ್) ವಿಚಾರದಲ್ಲಿ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳುವುದು ಒಳ್ಳೆಯದು,ಅಲ್ಲೂ ಸ್ಟಾಪ್ ಲಾಕ್ ಗೇಟ್ ಇಲ್ಲ,ತುಂಗಭದ್ರಾ ಅಣೆಕಟ್ಟೆಯ ಪರಿಸ್ಥಿತಿ ಗಮನಿಸಿದರೆ ದೂರದೃಷ್ಟಿಯಿಂದ ಕೆಆರ್‌ಎಸ್‌ಗೆ ಸ್ಟಾಪ್ ಲಾಕ್ ಹಾಕಬೇಕು, ತುಂಗಭದ್ರಾ ಜಲಾಶಯದ ಸಮಸ್ಯೆ ಸರ್ಕಾರದ ನಿರ್ಲಕ್ಷ್ಯ ಎನ್ನಲು ಆಗುವುದಿಲ್ಲ ಎಂದು ಹೆಚ್ ಡಿ ಕೆ ತಿಳಿಸಿದರು.
ಅಣೆಕಟ್ಟೆ ನಿರ್ವಹಣೆಗೆ ತಾಂತ್ರಿಕ ಸಮಿತಿ ಇರುತ್ತದೆ. ಆ ಸಮಿತಿ ವರ್ಷಕ್ಕೊಮ್ಮೆ ಜಲಾಶಯದ ಸಮಸ್ಯೆಗೆಳನ್ನು ಪರಿಶೀಲನೆ ಮಾಡುತ್ತಿರುತ್ತದೆ, ಕಾಟಚಾರಕ್ಕೆ ಪರಿಶೀಲನೆ ಮಾಡಿ ವರದಿ ನೀಡುತ್ತದೆ,ಅದರ ಪರಿಣಾಮವೇ ಈ ರೀತಿಯ ಅನಾಹುಗಳು ಎಂದು ಕಿಡಿಕಾರಿದರು.
ಈ ಗೇಟ್ ದುರಸ್ಥಿತಿ ಮಾಡುವುದು ಸರ್ಕಾರಕ್ಕೆ ಕ್ಲಿಷ್ಟಕರ ಮತ್ತು ಸವಾಲಾಗಿದೆ, ತಾಂತ್ರಿಕ ಪರಿಣಿತರ ಜತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.