Tue. Dec 24th, 2024

ಈ ಬಾರಿ ವಿಜೃಂಭಣೆಯ ದಸರಾ ಆಚರಣೆ: ಸಿಎಂ ಸಿದ್ದರಾಮಯ್ಯ

Share this with Friends

ಬೆಂಗಳೂರು, ಆ.12: ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ನಾಡಹಬ್ಬ ಮೈಸೂರು ದಸರಾವನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಾಡಹಬ್ಬ ಮೈಸೂರು ದಸರಾ 2024ರ ಉನ್ನತ ಮಟ್ಟದ ಸಭೆಯ ಬಳಿಕ ಸಿಎಂ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಕಳೆದ ಬಾರಿ ಬರಗಾಲದ ಕಾರಣ ಅದ್ದೂರಿಯಾಗಿ ಆಚರಿಸಲು ಆಗಿರಲಿಲ್ಲ, ಈ ಬಾರಿ ರಾಜ್ಯದಾದ್ಯಂತ ಉತ್ತಮ ಮಳೆಯಾಗಿದೆ, ಬಹುತೇಕ ಎಲ್ಲಾ ಜಲಾಶಯಗಳು ತುಂಬಿವೆ,ಹಾಗಾಗಿ ದಸರಾವನ್ನು ವಿಜೃಂಭಣೆಯಿಂದ ಜನರ ಹಬ್ಬವನ್ನಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕಳೆದ ವರ್ಷ ದಸರಾ ಆಚರಣೆಗೆ 30 ಕೋಟಿ ರೂ ನೀಡಲಾಗಿತ್ತು, ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಅಗತ್ಯ ಅನುದಾನ ಒದಗಿಸಲಾಗುವುದು ಎಂದು ‌ಭರವಸೆ ನೀಡಿದರು.

ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಟ್ಯಾಬ್ಲೋಗಳು ಹೆಚ್ಚು ಆಕರ್ಷಕ, ಅರ್ಥಗರ್ಭಿತವಾಗಿ ಹಾಗೂ ವೈವಿಧ್ಯಮಯವಾಗಿರಬೇಕೆಂದು ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು

ಅಕ್ಟೋಬರ್‌ 3ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 9.15ಕ್ಕೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಉದ್ಘಾಟನೆ ದಿನವೇ ವಸ್ತು ಪ್ರದರ್ಶನ ಕೂಡಾ ಆರಂಭಿಸಲು ಸೂಚಿಸಲಾಗಿದೆ, ವಸ್ತು ಪ್ರದರ್ಶನದಲ್ಲಿ ಎಲ್ಲ ಇಲಾಖೆಗಳ ಮಳಿಗೆಗಳಲ್ಲಿ ಸರ್ಕಾರದ ಸಾಧನೆಗಳು, ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ಕೆಲಸವಾಗಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಆಗಸ್ಟ್‌ 21 ರಂದು ಬೆಳಿಗ್ಗೆ 10.10 ಗಂಟೆಯಿಂದ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪೂಜೆ ಮಾಡಲಾಗುವುದು. ಅಕ್ಟೋಬರ್‌ 3 ರಿಂದ 12ರ ವರೆಗೆ ನಡೆಯಲಿದೆ. ಸಂಪ್ರದಾಯದಂತೆ 9 ದಿನ ಕಾರ್ಯಕ್ರಮಗಳು ಹಾಗೂ 10ನೇ ದಿನ ಜಂಬೂ ಸವಾರಿ ಏರ್ಪಾಡು ಮಾಡಲಾಗತ್ತದೆ. ಅಕ್ಟೋಬರ್‌ 12 ರಂದು ಮಧ್ಯಾಹ್ನ 1.41 ರಿಂದ 2.10 ಗಂಟೆ ವರೆಗೆ ಜಂಬೂ ಸವಾರಿ, ನಂದಿ ಧ್ವಜ ಪೂಜೆ ಹಾಗೂ ಸಂಜೆ 4 ಗಂಟೆಯಿಂದ ಪುಷ್ಪಾರ್ಚನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ, ದೀಪಾಲಂಕಾರ, ಆಹಾರ ಮೇಳ ಮತ್ತಿತರ ಕಾರ್ಯಕ್ರಮಗಳನ್ನು ಅತ್ಯಂತ ವ್ಯವಸ್ಥಿತವಾಗಿ, ಅರ್ಥಪೂರ್ಣವಾಗಿ ಆಯೋಜಿಸಬೇಕು, ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶ ದೊರಕಿಸಬೇಕು ಎಂದು ಸೂಚಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂಬುವುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


Share this with Friends

Related Post