ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯ ದಿನ ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸಿ, ರಾಷ್ಟ್ರಗೀತೆ ಮೊಳಗುವಾಗ ಹಾರಿಸುವ 21 ಕುಶಾಲ ತೋಪು ಸಿಡಿಸುವ ತಾಲೀಮು ಪ್ರಾರಂಭವಾಯಿತು.
ಅರಮನೆ ಆವರಣದಲ್ಲಿ ತಾಲೀಮಿಗೆ ಬುಧವಾರ ಚಾಲನೆ ನೀಡಲಾಗಿದ್ದು,ಆನೆ ಬಾಗಿಲಿನಲ್ಲಿ ಒಂದು ತಿಂಗಳ ಕಾಲ ಈ ತಾಲೀಮು ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಸರಾ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಂದು ಗಣ್ಯರು ಅಂಬಾರಿಗೆ ಪುಷ್ಪಾರ್ಚನೆ ಮಾಡುವಾಗ ರಾಷ್ಟ್ರಗೀತೆ ಹಾಡಲಾಗುತ್ತದೆ.ಆ ಸಂದರ್ಭದಲ್ಲಿ ಅರಮನೆಯ ಪಕ್ಕದ ಮಾರಮ್ಮ ದೇವಾಲಯದ ಪಾರ್ಕಿಂಗ್ ಪ್ರದೇಶದಲ್ಲಿ ರಾಜಪರಂಪರೆಯಂತೆ ಸಾಂಪ್ರದಾಯಿಕ 21 ಸುತ್ತು ಕುಶಾಲತೋಪು ಹಾರಿಸುವುದು ವಾಡಿಕೆ.
ಅದಕ್ಕಾಗಿ ಪ್ರತಿದಿನ ನುರಿತ ಸಿಬ್ಬಂದಿ ತಾಲೀಮು ನಡೆಸುತ್ತಾರೆ.ಸಿಎಆರ್ ಪೊಲೀಸ್ ತಂಡದ ಎಸಿಪಿ ನೇತೃತ್ವದಲ್ಲಿ ಪ್ರತಿದಿನ ಎಎಸ್ಐ ಸಿದ್ದರಾಜು ಮುಂದಾಳತ್ವದಲ್ಲಿ ಅರಮನೆ ಆನೆ ಬಾಗಿಲಿನಲ್ಲಿರುವ 7 ಫಿರಂಗಿಗಳ ಮೂಲಕ ಕುಶಾಲತೋಪು ಸಿಡಿಸುವ ತಾಲೀಮು ನಡೆಯಲಿದೆ.
ಸೆ.25ರ ಬಳಿಕ ಮೂರು ಬಾರಿ ಗಜಪಡೆ, ಅಶ್ವಪಡೆ ಮುಂದೆ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲು ನಿರ್ಧರಿಸಲಾಗಿದೆ. ಮೊದಲ ತಾಲೀಮಿನಲ್ಲಿ ಒಂದು ಸುತ್ತಿನ ಸಿಡಿಮದ್ದು ಸಿಡಿತದ ಬಳಿಕ ಕೆಲ ನಿಮಿಷ ವಿಶ್ರಾಂತಿ ನೀಡಿ, ಎರಡನೇ ಸುತ್ತಿನ ಸಿಡಿಮದ್ದು ತಾಲೀಮು ನಡೆಸಲಾಗುತ್ತದೆ.
ಆನೆ, ಕುದುರೆಗಳ ವರ್ತನೆಯನ್ನು ಪರಿಶೀಲಿಸಿ ಮೂರನೇ ಸುತ್ತಿನ ತಾಲೀಮು ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.