ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆಯಲು ಸ್ಮಾರ್ಟ್ ಕಾರ್ಡ್ ತರಲು ಹೊರಟರೆ ಲೂಟಿ ಅವಕಾಶ ನೀಡಿದಂತಾಗುತ್ತದೆ,ಹಾಗಾಗಿ ಅದನ್ನು ಕೈಬಿಡಬೇಕೆಂದು ವಿಶ್ವ ಹಿಂದೂ ಪರಿಷತ್ ಜಿಲ್ಲಧ್ಯಕ್ಷ ಕೆ ಮಹೇಶ ಕಾಮತ್ ಒತ್ತಾಯಿಸಿದ್ದಾರೆ.
ಕನಿಷ್ಟ 5000 ದಿಂದ ಗರಿಷ್ಟ ರೂ 1 ಲಕ್ಷಕ್ಕೆ ಕಾರ್ಡ್ ಮಾರುವುದರಿಂದ ಜನ ಸಾಮಾನ್ಯರಿಗೆ ಹಾಗೂ ಬೇರೆ ಬೇರೆ ರಾಜ್ಯದಿಂದ ಬರುವ ಪ್ರವಾಸಿಗರಿಗೆ ದೇವಿ ದರ್ಶನಕ್ಕೆ ಬಹಳ ತೊಂದರೆಯಾಗುವ ಜೊತೆ ಹಣ ಲೂಟಿ ಮಾಡುವ ಸನ್ನಿವೇಶವಿರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ವಿಶೇಷ ದಿನ ಹಾಗೂ ವಾರಾಂತ್ಯದಲ್ಲಿ ಸಾವಿರಾರು ಜನರು ರಾಜಕಾರಣಿಗಳ ಹೆಸರು ಹೇಳಿಕೊಂಡು ನೇರ ದರ್ಶನ ಪಡೆಯುವುದರಿಂದ ಸಾಮಾನ್ಯ ಜನರಿಗೆ ದರ್ಶನ ಪಡೆಯಲು ತೊಂದರೆ ಪಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.ಹಾಗಿರುವಾಗ ಸ್ಮಾರ್ಟ್ ಕಾರ್ಡ್ ಮಾಡುವುದರಿಂದ ಹಣವಿರುವವರು ಮಾತ್ರ ನೇರ ದರ್ಶನ ಪಡೆಯಲು ವಿಶೇಷ ದಿನ ಹಾಗೂ ವಾರಾಂತ್ಯಕ್ಕೆ ಬರಲು ಪ್ರಾರಂಬಿಸಿದರೆ ಸಾರ್ವಜನಿಕರಿಗೆ ಅದರಲ್ಲೂ ಬೇರೆ ರಾಜ್ಯದಿಂದ ಬರುವ ಪ್ರವಾಸಿಗರಿಗೆ ದೇವಿಯ ದರ್ಶನ ಮಾಡಲು ಅವಕಾಶವೇ ಇಲ್ಲದಂತಾಗುತ್ತದೆ ಎಂದು ಕಾಮತ್ ಅಭಿಪ್ರಾಯ ಪಟ್ಟಿದ್ದಾರೆ.
ರಾಜಕಾರಣಿಗಳಿಗೂ ಸಹ ಗುಂಪು ಗುಂಪಾಗಿ ದರ್ಶನ ಪಡೆಯಲು ಅವಕಾಶ ನೀಡಬಾರದು ಎಂದು ಅವರು ಹೇಳಿದ್ದಾರೆ.
ಕೆಲವು ಮಂದಿ ಪ್ರವಾಸಿಗರಿಂದ ಹೆಚ್ಚಿನ ಹಣ ಪಡೆದು ನೇರ ದರ್ಶನ ಮಾಡುವ ವ್ಯವಸ್ಥೆ ಮಾಡಿಸಿ ಸಾವಿರಾರು ರೂಪಾಯಿ ಲೂಟಿ ಮಾಡುತ್ತಿದ್ದಾರೆ ಇದರಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕರಿಗೂ ಪಾಲು ಹೋಗುತ್ತದೆ ಎಂದು ಕೆಲವರು ಆರೋಪಿಸಿದ್ದಾರೆ.ಆದ್ದರಿಂದ ಸರ್ಕಾರವು ಕೂಡಲೇ ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
ಈಗ ಇರುವಂತೆ ಸರತಿ ಸಾಲಿನಲ್ಲಿ ಬಂದವರಿಗೆ ದರ್ಶನ ಪಡೆಯಲು ಅವಕಾಶ ಮಾಡಬೇಕು ಮತ್ತು ವಿಶೇಷದಿನ ಹಾಗೂ ವಾರಾಂತ್ಯಕ್ಕೆ ರಾಜಕಾರಣಿಗಳಿಗೆ ನಿರ್ದಿಷ್ಟ ಸಮಯ ನಿಗದಿಪಡಿಸಿ ಪ್ರವಾಸಿಗರಿಗೆ, ಭಕ್ತರಿಗೆ ಆಗುವ ತೊಂದರೆಯನ್ನ ತಪ್ಪಿಸಬೇಕೆಂದು ಕೆ ಮಹೇಶ ಕಾಮತ್ ಮನವಿ ಮಾಡಿದ್ದಾರೆ.