ಬೆಂಗಳೂರು, ಫೆ.19: ಟಾಟಾ ಸಮೂಹ ಸಂಸ್ಥೆಯ ಏರ್ ಇಂಡಿಯಾ ಹಾಗೂ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ರಾಜ್ಯದಲ್ಲಿ ಒಟ್ಟು 2300 ಕೋಟಿ ರೂಪಾಯಿ ಹೂಡಿಕೆಗೆ ಮುಂದಾಗಿದೆ.
ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಟಾಟಾ ಸಮೂಹ ಸಂಸ್ಥೆಯ ಏರ್ ಇಂಡಿಯಾ ಹಾಗೂ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಂಸ್ಥೆಯ ಪ್ರಮುಖರು ರಾಜ್ಯದಲ್ಲಿ ಒಟ್ಟು 2300 ಕೋಟಿ ರೂ ಹೂಡಿಕೆ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆಗೆ ಸಹಿ ಮಾಡಿದರು.
ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಎಂ. ಬಿ.ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಟಾಟಾ ಸಮೂಹದ ನಿಪುಣ್ ಅಗರ್ ವಾಲ್ , ಸುಕರಣ್ ಸಿಂಗ್, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿ., ಸಿಇಒ ಹರಿ ಮರಾರ್ ಹಾಜರಿದ್ದರು.
ಸಹಿ ಮಾಡಿದ ನಂತರ ಮಾತನಾಡಿದ ಎಂ. ಬಿ ಪಾಟೀಲ್ ಟಾಟಾ ಸಮೂಹದ ಈ ಹೂಡಿಕೆಯಿಂದ ನೇರವಾಗಿ 1650 ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಟ್ಟು ಹೂಡಿಕೆಯ ಪೈಕಿ ಏರ್ ಇಂಡಿಯಾ ಕಂಪನಿಯು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಓವರ್ ಹಾಲ್ ಘಟಕವನ್ನು ಸ್ಥಾಪಿಸಲು 1300 ಕೋಟಿ ರೂ ಹೂಡಿಕೆ ಮಾಡುತ್ತಿದೆ ಎಂದು ಹೇಳಿದರು.
ಇದರಿಂದ 1200 ಮಂದಿಗೆ ನೇರವಾಗಿ ಉದ್ಯೋಗ ಸಿಗಲಿದೆ ಮತ್ತು ಪರೋಕ್ಷವಾಗಿ 25 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಇದು ನಮ್ಮ ದೇಶದಲ್ಲೇ ಮೊಟ್ಟಮೊದಲ ಯೋಜನೆಯಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು