ಮೈಸೂರು: ನಾಗರೀಕತೆ ಮತ್ತು ಸಂಸ್ಕೃತಿಯನ್ನು ಅರ್ಥೈಸಿಕೊಳ್ಳುವಲ್ಲಿ ಶಿಲ್ಪ ಕಲೆಗಳ ಪಾತ್ರ ಮಹತ್ವವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಸಿ ಮಹಾದೇವಪ್ಪ ಹೇಳಿದರು.
ಲಲಿತ ಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಹಾಗೂ ಕರ್ನಾಟಕ ಶಿಲ್ಪಕಲಾ ಶಿಬಿರ ಅಕಾಡೆಮಿ, ಬೆಂಗಳೂರು ವತಿಯಿಂದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಶಿಲ್ಪಕಲಾ ಶಿಬಿರ ಉದ್ಘಾಟಿಸಿ ಸಚಿವರು ಮಾತನಾಡಿದರು.
ದೇಶ ಕಂಡಂತಹ ಅಮರ ಶಿಲ್ಪಿ ಜಕಣ ಚಾರಿ ಅವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿವೆ. ಅಲ್ಲದೆ ಸೋಮನಾಥಪುರ, ಬೇಲೂರು ಮತ್ತು ಹಳೇಬೀಡಿನ ದೇವಾಯಗಳ ಒಂದೊಂದು ಕೆತ್ತನೆಗಳು ಒಂದೊಂದು ಕಥೆಯನ್ನು ಅದರ ಇತಿಹಾಸವನ್ನು ತಿಳಿಸುತ್ತವೆ ಎಂದು ಬಣ್ಣಿಸಿದರು.
ಕಲಾವಿದರು ಇದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಯುವ ಪೀಳಿಗೆಗೆ ಹಾಗೂ ಮುಂದಿನ ಪೀಳಿಗೆಗೆ ಇತಿಹಾಸದ ಸತ್ಯವನ್ನು ತಿಳಿಸುವ ಶಿಲ್ಪಕಲೆಗಳನ್ನು ರಚಿಸಿ, ನಮ್ಮ ದೇಶದ ಶ್ರೀಮಂತ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಮಹದೇವಪ್ಪ ಕರೆ ನೀಡಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ,
ಚೆನ್ನಪಟ್ಟಣದ ಗೊಂಬೆಗಳು, ಕುಂಬಾರರ ಮಡಿಕೆಗಳು, ಕಲ್ಲು ಕೆತ್ತನೆಗಳು ಹಾಗೂ ಇತ್ಯಾದಿಗಳನ್ನು ತಂದು ಅದಕ್ಕೆ ವಿಭಿನ್ನ ರೂಪ ಕೊಟ್ಟು ವಿಶೇಷ ಕಲಾಕೃತಿಗಳ ರಚನೆ ಮಾಡಬೇಕು. ದಸರಾ ಸಂದರ್ಭದಲ್ಲಿ ಕಲಾ ವಿದ್ಯಾರ್ಥಿಗಳು ರಚಿಸುವ ಉತ್ಪನ್ನಗಳನ್ನು ಬಳಸುವ ಮೂಲಕ ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು ಎಂದು ಹೇಳಿದರು.
ಲಲಿತ ಕಲೆ ಮತ್ತು ಕರಕುಶಲ ಉಪಸಮಿತಿಯ ಉಪ ವಿಶೇಷಾಧಿಕಾರಿ ಎ. ದೇವರಾಜು ಅವರು ಮಾತನಾಡಿ,ಈ ವರ್ಷ ರಾಜ್ಯಮಟ್ಟದ ಶಿಲ್ಪಕಲಾ ಶಿಬಿರವು ಭಾರತ ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಚಳವಳಿ ಮತ್ತು ಸಂವಿಧಾನದ ಮಹತ್ವ ಎಂಬ ವಿಷಯದ ಮೇಲೆ 10 ದಿನ ನಡೆಯಲಿದ್ದು, ರಾಜ್ಯದ ವಿವಿಧ ಭಾಗದಿಂದ ಪ್ರಸಿದ್ಧ ಕಲಾವಿದರು ಆಗಮಿಸಿ, ಶಿಬಿರಾರ್ಥಿಗಳಿಗೆ ಉಪಯುಕ್ತವಾದ ಸಲಹೆ ನೀಡಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ.ಗಾಯತ್ರಿ,ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್ ಹಾಗೂ ಲಲಿತ ಕಲೆ ಮತ್ತು ಕರಕುಶಲ ಕಲೆಯ ಕಲಾವಿದರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.