ಮೈಸೂರು: ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿದ್ದ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ತೀರ್ಪನ್ನು ವಿಧಾನ ಪರಿಷತ್ ಬಿಜೆಪಿ ಸದಸ್ಯ ವಿಶ್ವನಾಥ್ ಸ್ವಾಗತಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಗೆ ಹೋದರೂ ಸಿಎಂ ಪರ ತೀರ್ಪು ಬರಲ್ಲ ಹಾಗಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.
ನಾನು ಈ ಹಿಂದೆಯೇ ಹೇಳಿದ್ದೆ 14 ಸೈಟುಗಳನ್ನು ವಾಪಸ್ ಕೊಡಿ ತನಿಖೆ ಮಾಡಿಸಿ ಎಂದು ಸಿದ್ದರಾಮಯ್ಯಗೆ ಮನವಿ ಮಾಡಿದ್ದೆ, ಯಾರೋ ನಿಮ್ಮ ಕೈಕೆಳಗೆ ಸಹಿ ಹಾಕಿಸಿ ಮೋಸ ಮಾಡಿದ್ದಾರೆ ಎಂದಿದ್ದೆ. ನಾನು ಹೇಳಿದ ಹಾಗೆ ತನಿಖೆ ಮಾಡಿದ್ದರೆ ಸತ್ಯ ಹೊರ ಬರುತ್ತಿತ್ತು ಎಂದು ತಿಳಿಸಿದರು.
ತನಿಖೆ ನಡೆದಿದ್ದರೆ ಎಲ್ಲ ಪಕ್ಷಗಳ ಕಳ್ಳರು ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ನನ್ನ ಮಾತು ಧಿಕ್ಕರಿಸಿ ನಿಮ್ಮ ಸುತ್ತ ಮುತ್ತ ಇರುವವರ ಮಾತು ನಂಬಿದಿರಿ,ಈಗ ಕೋರ್ಟ್ ತೀರ್ಪು ಬಂದಿದೆ ಸುಪ್ರೀಂ ಕೋರ್ಟ್ ಗೆ ಹೋದರೂ ಪ್ರಯೋಜನ ಇಲ್ಲ ರಾಜೀನಾಮೆ ಕೊಟ್ಟು ತನಿಖೆ ಎದುರಿಸುವುದು ಒಳಿತು ಎಂದು ಹೆಚ್.ವಿಶ್ವನಾಥ್ ತಿಳಿಸಿದರು.