Mon. Dec 23rd, 2024

ಬಾಲ ಕಾರ್ಮಿಕ ಕಾಯ್ದೆಯಡಿ ಬಾಲ ಕಲಾವಿದರು ನಟಿಸಲು ಕಾರ್ಮಿಕ ಇಲಾಖೆಯಿಂದ ಅನುಮತಿ

Share this with Friends

ಬೆಂಗಳೂರು, ಫೆ.19: ಮಕ್ಕಳು ಬಾಲ ನಟ ಅಥವಾ ನಟಿಯಾಗಿ ಕೆಲಸ ಮಾಡಲು ಕಾನೂನಾತ್ಮಕ ಅಂಶಗಳನ್ನು ಪಾಲಿಸಬೇಕೆಂದು ಕಾರ್ಮಿಕ ಇಲಾಖೆ‌ ಆದೇಶಿಸಿದೆ.

ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ,1986ರ ಕರ್ನಾಟಕ ನಿಯಮಗಳನ್ವಯ ಮಕ್ಕಳು ಬಾಲ ನಟ ಅಥವಾ ನಟಿಯಾಗಿ ಕೆಲಸ ಮಾಡಲು ಕಾನೂನಾತ್ಮಕ ಅಂಶಗಳನ್ನು ಪಾಲಿಸಬೇಕೆಂದು ಕಾರ್ಮಿಕ ಇಲಾಖೆ‌ ಸೂಚಿಸಿದೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ಕುರಿತು ಕಾರ್ಮಿಕ ಇಲಾಖೆ ಪತ್ರ ಬರೆದಿದ್ದು,ನಿಯಮಗಳನ್ನು ಸಂಬಂಧಪಟ್ಟ ಎಲ್ಲರೂ ಅನುಸರಿಸಬೇಕೆಂದು ಮಂಡಳಿಯ ಅಧ್ಯಕ್ಷರು ಮನವಿ ಮಾಡಿದ್ದಾರೆ.

ಯಾವುದೇ ಮಗುವಿನ ಬಗ್ಗೆ ನಿರ್ಲಕ್ಷ್ಯ ಅಥವಾ ಶೋಷಣೆ ಆಗದಂತೆ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ನಿಬಂಧನೆಗಳು, ಸುರಕ್ಷತೆ ಮತ್ತು ಮಕ್ಕಳ ದುರುಪಯೋಗ ತಡೆ ಕುರಿತು ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಸೂಚಿಸಲಾಗಿದೆ.

ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು, ಮಗುವಿಗೆ ಸಕಾಲಿಕ ಪೌಷ್ಠಿಕ ಆಹಾರ ಒದಗಿಸಬೇಕು,ದೈನಂದಿನ ಅಗತ್ಯಗಳಿಗೆ ಸಾಕಾಗುವಷ್ಟು ಸಾಮಾಗ್ರಿಗಳು, ಸ್ವಚ್ಚ, ಸುರಕ್ಷಿತ ಆಶ್ರಯ ಒದಗಿಸಬೇಕು.

ಶಿಕ್ಷಣದ ಹಕ್ಕು ಸಂರಕ್ಷಣೆ, ಲೈಂಗಿಕ ಅಪರಾಧಗಳಿಂದ ರಕ್ಷಣೆ ಒಳಗೊಂಡಂತೆ ಮಕ್ಕಳ ರಕ್ಷಣೆ ಕುರಿತು ಕಾಲ ಕಾಲಕ್ಕೆ ಜಾರಿಯಲ್ಲಿರುವ ಎಲ್ಲಾ ಕಾನೂನುಗಳ ಪಾಲನೆ ಮಾಡಬೇಕೆಂದು ಕಾರ್ಮಿಕ ಇಲಾಖೆ ಆದೇಶಿಸಿದೆ

ಮಗು ಶಾಲೆಯ ಪಾಠ ಪ್ರವಚನಗಳಿಗೆ ಗೈರಾಗದಂತೆ ಶಿಕ್ಷಣದಲ್ಲಿ ನಿರಂತರವಾಗಿ ಮುಂದುವರೆಯಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದನ್ನು ಖಾತರಿಪಡಿಸಬೇಕಿದೆ.

ಯಾವುದೇ ಮಗು ನಿರಂತರವಾಗಿ 27 ದಿನಗಳಿಗಿಂತ ಹೆಚ್ಚಿನ ದಿನಗಳು ನಟನಾ ಕೆಲಸದಲ್ಲಿ ತೊಡಗಲು ಅವಕಾಶ ನೀಡಬಾರದು.

ಮಗುವಿನ ರಕ್ಷಣೆ, ಪೋಷಣೆ ಮತ್ತು ಹಿತಾಸಕ್ತಿಯನ್ನು ಕಾಪಾಡಲು ನಿರ್ಮಾಣ ಅಥವಾ ಕಾರ್ಯಕ್ರಮದಲ್ಲಿ ತೊಡಗಿರುವ ಪ್ರತಿ 5 ಮಕ್ಕಳಿಗೆ ಒಬ್ಬರಂತೆ ಜವಬ್ದಾರಿಯುತ ವ್ಯಕ್ತಿಯನ್ನು ನೇಮಿಸಬೇಕಿದೆ

ನಿರ್ಮಾಣ ಅಥವಾ ಕಾರ್ಯಕ್ರಮದಿಂದ ಮಗುವಿಗೆ ಬರುವ ಒಟ್ಟು ಆದಾಯದ ಶೇ.20 ರಷ್ಟನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಗುವಿನ ಹೆಸರಿನಲ್ಲಿ ನಿಶ್ಚಿತ ಠೇವಣಿ ಖಾತೆ ತೆರೆದು ಇಡಬೇಕು ಅದನ್ನು ಮಗು ಪ್ರಾಯಸ್ಥನಾದಾಗ ಪಡೆಯಲು ಅವಕಾಶ ಕಲ್ಪಿಸಬೇಕೆಂದು ಸೂಚಿಸಲಾಗಿದೆ.

ಯಾವುದೇ ಮಗುವಿನ ಒಪ್ಪಿಗೆ ಮತ್ತು ಇಚ್ಛೆಗೆ ವಿರುದ್ಧವಾಗಿ ಯಾವುದೇ ಧ್ವನಿ, ದೃಶ್ಯ ಮತ್ತು ಕ್ರೀಡಾ ಚಟುವಟಿಕೆ, ಅನೌಪಾಚಾರಿಕ ಮನರಂಜನಾ ಚಟುವಟಿಕೆಗಳಲ್ಲಿ ಬಲವಂತವಾಗಿ ಭಾಗವಹಿಸುವಂತೆ ಮಾಡಬಾರದು.

ಕೇಂದ್ರ ಸರ್ಕಾರದ ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ಜಯಂತ್ರಣ) ಕಾಯ್ದೆಯ ನಿಬಂಧನೆಗಳು, ನಿಯಮಗಳನ್ನು ಅನುಸರುಸಿ ಮಗುವನ್ನು ಕಲಾವಿದನಾಗಿ ನಟನಾ ಕೆಲಸ ಮಾಡಲು ಅನುಮತಿ ನೀಡಬಹುದು ಎಂದು ಇಲಾಖೆ ತಿಳಿಸಿದೆ.

ಜತೆಗೆ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

14- 18 ರ ವಯಸ್ಸಿನ ಕಿಶೋರ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಒಂದು ವೇಳೆ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ತಪ್ಪಿತಸ್ಥ ಮಾಲಿಕರಿಗೆ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ, 20,000 ದಿಂದ 50.000 ರೂ ರವರೆಗೆ ದಂಡ ವಿಧಿಸಲು ಅವಕಾಶವಿದೆ. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಎಚ್ಚರಿಕೆ ನೀಡಲಾಗಿದೆ.


Share this with Friends

Related Post