Tue. Dec 24th, 2024

ವಸತಿ ಶಾಲೆಗಳಲ್ಲಿದ್ದ ಘೋಷ ವಾಕ್ಯ ಬದಲಾವಣೆ: ಸರ್ಕಾರದ ವಿರುದ್ಧ ಪ್ರತಿಭಟನೆ

Share this with Friends

ಮೈಸೂರು, ಫೆ.20: ಕುವೆಂಪು ಅವರ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ಘೋಷ ವಾಕ್ಯವನ್ನು ಬದಲಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯವರು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರವು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ಘೋಷವಾಕ್ಯವನ್ನು ಬದಲಾಯಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಇಂದು ಡಾ. ರಾಜಕುಮಾರ್ ಉದ್ಯಾನವನದ ಮುಂಭಾಗ ಕರ್ನಾಟಕ ಸೇನಾ ಪಡೆ ಪ್ರತಿಭಟನೆ ನಡೆಸಿತು.

ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ಘೋಷ ವಾಕ್ಯವನ್ನು ಧ್ಯಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು, ಎಂದು ಬದಲಾಯಿಸಿ ಈ ನೆಲದ ಸಂಸ್ಕೃತಿಯಾದ ವಿದ್ಯಾ ಮಂದಿರದ ಪಾವಿತ್ರ್ಯವನ್ನು ಹಾಳು ಮಾಡಲು ಹೊರಟಿರುವ ಐಎಎಸ್ ಅಧಿಕಾರಿ ಮಣಿವಣ್ಣನ್ ನಡೆ ಅವಮಾನವೀಯ ಎಂದು ಪ್ರತಿಭಟನಾ ನಿರತರು ಕಿಡಿಕಾರಿದರು.

ನಮ್ಮ ನಾಡಿಗೆ – ರಾಜ್ಯಕ್ಕೆ – ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಡುವ ಮೂಲಕ ಕುವೆಂಪು ಅವರು ನಮ್ಮ ರಾಜ್ಯದ ಆಸ್ತಿಯಾಗಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಘೋಷ ವಾಕ್ಯ, ದಶಕಗಳಿಂದ ಕೋಟ್ಯಾಂತರ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪ್ರೇರಣೆಯಾಗಿದೆ.

ಕೈಮುಗಿದು ಒಳಗೆ ಬಾ ಎಂದರೆ, ಅಹಂಕಾರ ತೊರೆದು, ವಿನಯಶೀಲನಾಗಿ,ಜ್ಞಾನ ಸಂಪಾದಿಸಲು, ಭೇದಭಾವ ತೊರೆದು, ನಿನ್ನ ಹೆದರಿಕೆ ಎಲ್ಲವನ್ನೂ ಬಿಟ್ಟು ವಿದ್ಯೆಯನ್ನು ಶ್ರದ್ಧೆಯಿಂದ ಕಲಿ ಎಂದು

ಇದನ್ನು ಅರಿಯದ, ನಮ್ಮ ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ಅರಿವಿಲ್ಲದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೌಖಿಕ ಆದೇಶದ ಮೇರೆಗೆ ವಸತಿ ಶಾಲೆಗಳಲ್ಲಿ ಬದಲಾವಣೆ ಮಾಡಿರುವುದು ಅತ್ಯಂತ ಖಂಡನೀಯ, ಸರ್ಕಾರ ಇದನ್ನು ಕೂಡಲೇ ಸರಿಪಡಿಸಬೇಕು ಹಾಗೂ ಮಣಿವಣ್ಣನ್ ರವರನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.

ರಾಜ್ಯ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ವಿರುದ್ದ ಘೋಷಣೆ ಕೂಗಿದರು.

ಕೃಷ್ಣಪ್ಪ, ಪ್ರಭುಶಂಕರ್ ಎಂ ಬಿ, ಪ್ರಜೀಶ್ ಪಿ, ಕುಮಾರ್ ಬಸಪ್ಪ, ಮಹದೇವಸ್ವಾಮಿ, ಹನುಮಂತಯ್ಯ, ರಾಮಕೃಷ್ಣೇಗೌಡ, ರಾಧಾಕೃಷ್ಣ, ವಿಷ್ಣು, ದರ್ಶನ್ ಗೌಡ, ಪದ್ಮ, ಸ್ವಾಮಿ ಗೌಡ, ಪ್ರದೀಪ್, ಗುರುಮಲ್ಲಪ್ಪ, ತ್ಯಾಗರಾಜ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Share this with Friends

Related Post