ಮೈಸೂರು: ಮೈಸೂರಿನ ಉತ್ತನಹಳ್ಳಿಯಲ್ಲಿ ನಡೆದ ಯುವ ದಸರಾದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಮತ್ತು ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಚರಣ್ ಅವರು ಗಾನಸುಧೆ ಹರಿಸಿ ಜನರಿಗೆ ಮೋಡಿ ಮಾಡಿದರು.
ಮೈಸೂರಿನಲ್ಲಿ 1974 ರಲ್ಲಿ ನಾನು ಕಾರ್ಯಕ್ರಮವನ್ನು ನೀಡಲು ಬಂದಿದ್ದೆ, ಆಗಿನಿಂದಲೂ ಮೈಸೂರಿನ ಆತ್ಮೀಯತೆ ಇಷ್ಟವಾಯಿತು ಎಂದು ಈ ವೇಳೆ ಇಳಯರಾಜ ಸ್ಮರಿಸಿದರು.
ಆ ದಿನ ಜಿ.ಕೆ ವೆಂಕಟೇಶ್, ಪಿ.ಬಿ ಶ್ರೀನಿವಾಸ್, ಎಸ್ ಜಾನಕಿ ಅವರ ಜೊತೆಯಲ್ಲಿ ಕೀ ಬೋರ್ಡ್ ನುಡಿಸಲು ಬಂದವನು ನಾನು ಎಂದು ಹೇಳಿದರು.
ತಾಯಿ ಚಾಮುಂಡೇಶ್ವರಿಯ ಆಶೀರ್ವಾದವೇ ನನ್ನನ್ನು ಮೈಸೂರಿಗೆ ಕರೆಸಿ ನಿಮ್ಮನ್ನು ನೋಡುವ ಅವಕಾಶ ದೊರಕಿದೆ ಎಂದು ಭಾವನಾತ್ಮಕವಾಗಿ ನುಡಿದರು.
ನಾಡ ದೇವತೆ ಚಾಮುಂಡೇಶ್ವರಿಯ ಗೀತೆಯಾದ ಜನನಿ ಜಗನಿ ಎಂಬ ತಮಿಳು ಗೀತೆಯ ಮೂಲಕ ಗಾಯನವನ್ನು ಆರಂಭಿಸಿ ಕೇಳುಗರ ಮನಸಿಗೆ ಮುದ ನೀಡಿದರು.
ಓಂ ಶಿವೋಂ ಓಂ ಶಿವೋಂ ಗೀತೆಯ ಮೂಲಕ ಶಿವನ ಆರಾಧಿಸಿದ ಇಳಿಯರಾಜ ಅವರು ಎದೆ ಝಲ್ ಎನಿಸುವಂತೆ ಮಾಡಿದರು.
ಎಸ್.ಪಿ. ಬಾಲಸುಬ್ರಹ್ಮಣ್ಯ ಅವರ ಮಗ ಎಸ್.ಪಿ ಚರಣ್ ಅವರ ಸುಮಧುರ ಧ್ವನಿಯಲ್ಲಿ ಅನಂತ್ ನಾಗ್ ಅವರ ಮಾತು ತಪ್ಪದ ಮಗ ಚಿತ್ರದ ಎಂತ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು ಕನ್ನಡ ನಾಡಿದು ಚಿನ್ನದ ಬೀಡಿದು ಎಂದು ಹಾಡುತ್ತಾ ಕನ್ನಡದ ಕಂಪನ್ನು ತುಂಬಿಸಿದರು.
ಡಾ. ರಾಜ್ ಕುಮಾರ್ ಅವರನ್ನು ನೆನೆದ ಚರಣ್ ಅವರು ಮೊದಲಿಗೆ ಹಾಡಿದ ಯಾರೇ ಕೂಗಾಡಲಿ ಊರೇ ಹೋರಾಡಲಿ ಗೀತೆಯನ್ನು ನೆನೆದು ಕುಣಿದು ಕುಪ್ಪಳಿಸಿದರು.
ಹಿನ್ನೆಲೆ ಗಾಯಕರಾದ ಶರತ್, ವಿಭಾರವಿ
ಗಾಯಕಿ ಶ್ವೇತಾ ಮೋಹನ್, ಹರಿ ಚರಣ್ ,ಗಾಯಕಿ ಅನನ್ಯ ಭಟ್ ಹೀಗೆ ಹಲವಾರು ಗಾಯಕರು ತಮ್ಮ ಸುಮಧುರ ಕಂಠದಿಂದ ಜನರನ್ನು ಮಂತ್ರ ಮುಗ್ದರನ್ನಾಗಿಸಿದರು.