ಮೈಸೂರು,ಫೆ.20: ಸರ್ವಜ್ಞನ ವಚನಗಳು ತ್ರಿಪದಿಗಳೆಂದೇ ಪ್ರಸಿದ್ಧಿಯಾಗಿದೆ ಎಂದು
ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ. ಗಾಯತ್ರಿ ತಿಳಿಸಿದರು.
ಸರ್ವಜ್ಞ ಹಲವಾರು ಅಂಶಗಳನ್ನು ಕುರಿತು ವಚನಗಳನ್ನು ರಚನೆ ಮಾಡಿದ ಒಬ್ಬ ಮೇಧಾವಿ ವಚನಕಾರರು, ಸಮಾಜದಲ್ಲಿನ ಅಂಕು ಡೊಂಕು, ಮೂಢನಂಬಿಕೆಗಳು ಹಳೆಯ ಸಂಪ್ರoದಾಯಗಳ ಕುರಿತು ವಚನಗಳಲ್ಲಿ ಪ್ರಸ್ತುತ ಪಡಿಸಿದ್ದಾರೆ, ಸರ್ವರಿಗೂ, ಸರ್ವಕಾಲಕ್ಕೂ ಅನ್ವಯವಾಗುವ ವಚನಗಳನ್ನು ಅವರು ರಚಿಸಿದ್ದಾರೆ ಎಂದು ತಿಳಿಸಿದರು.
ಇಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕಲಾಮಂದಿರದ ಆವರಣದ ಕಿರುರಂಗಮoದಿರದಲ್ಲಿ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಗೆ ಮಾದರಿಯಾಗುವ ನಿಟ್ಟಿನಲ್ಲಿ ಜಯಂತಿಗಳನ್ನು ನಾವು ಆಚರಣೆ ಮಾಡಬೇಕು. 12ನೇ ಶತಮಾನದಲ್ಲಿ ಕನ್ನಡದ ವಚನ ಸಾಹಿತ್ಯ ಕಬ್ಬಿಣದ ಕಡಲೆಯಾಗಿತ್ತು, ನಂತರದ ಕಾಲಮಾನದಲ್ಲಿ ಜನ ಸಾಮಾನ್ಯರಿಗೂ ಅರ್ಥವಾಗುವಂತಹ ರೀತಿಯಲ್ಲಿ ತ್ರಿಪದಿಗಳನ್ನು ರಚಿಸಿದ್ದಾರೆ ಎಂದು ಗಾಯತ್ರಿ ಹೇಳಿದರು.
ಮುಖ್ಯ ಭಾಷಣಕಾರರಾಗಿದ್ದ, ಕೆ. ಆರ್. ನಗರ ತಾಲೂಕಿನ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ಪ್ರಭಾಕರ್ ಹೆಗ್ಗಂದೂರ್ ಮಾತನಾಡಿ, ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊoಕುಗಳನ್ನು ತಿದ್ದಿದ ಸಮಾಜ ಸುಧಾರಕ, ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ವಚನಕಾರ ಸರ್ವಜ್ಞ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ. ಎಸ್ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ. ಎಂ.ಡಿ ಸುದರ್ಶನ್, ಕುಂಬಾರ ಸಂಘದ ಜಿಲ್ಲಾ ಅಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ಆರ್ ಸೋಮಶೇಖರ್, ಮಹಿಳಾ ಸಂಘದ ಅಧ್ಯಕ್ಷೆ ರೇಣುಕಾಂಬ, ಸರ್ವಜ್ಞ ಸೇವಾ ಸಮಿತಿ ಅಧ್ಯಕ್ಷ ವಾಸು ಮತ್ತಿತರರು ಉಪಸ್ಥಿತರಿದ್ದರು.