Fri. Nov 1st, 2024

ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿದ ಸಿದ್ದು

Share this with Friends

ಬೆಂಗಳೂರು: ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಗೆ ನಾನೇ ಶಂಕುಸ್ಥಾಪನೆ ಮಾಡಿದ್ದೆ,ಈಗ ನನ್ನಿಂದಲೇ ಉದ್ಘಾಟನೆಯಾಗಿದೆ, ನುಡಿದಂತೆ ನಡೆದಿದ್ದಕ್ಕೆ ಸಂತಸವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಕಾವೇರಿ ಐದನೇ ಹಂತದ ಯೋಜನೆ ಲೋಕಾರ್ಪಣೆಗೊಳಿಸಿ ಸಿಎಂ ಮಾತನಾಡಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಮತ್ತು ಹಿಂದಿನ ಸರ್ಕಾರಗಳು ಅಗತ್ಯ ಹಣ ಬಿಡುಗಡೆ ಮಾಡದೆ ನಿರಾಸಕ್ತಿ ತೋರಿದ್ದರಿಂದ ಯೋಜನೆ ನಿಧಾನವಾಯಿತು. ಮತ್ತೆ ನಾವು ಅಧಿಕಾರಕ್ಕೆ ಬಂದು ಯೋಜನೆ ಲೋಕಾರ್ಪಣೆಗೊಳಿಸಿ 110 ಹಳ್ಳಿಗಳಿಗೆ ನೀರನ್ನು ಒದಗಿಸಿದ್ದೇವೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ಆರನೇ ಹಂತದ ಯೋಜನೆಯನ್ನೂ ಕೈಗೆತ್ತಿಕೊಳ್ಳಲು ಈಗಾಗಲೇ ಸೂಚನೆ ನೀಡಿದ್ದೇನೆ ನಾವು ಸುಳ್ಳು ಹೇಳಿ ಅಧಿಕಾರಕ್ಕೆ ಬರುವುದಿಲ್ಲ,ಅಧಿಕಾರಕ್ಕೆ ಬಂದು ಸುಳ್ಳು ಹೇಳದೆ ನುಡಿದಂತೆ ನಡೆದು ಜನರ ಕೆಲಸ ಮಾಡಿ ತೋರಿಸಿದ್ದೇವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದ ತೆರಿಗೆಯಲ್ಲಿ ನಮಗೆ ಅನ್ಯಾಯ ಆಗಿದೆ,ಮೇಕೆದಾಟು ಯೋಜನೆಗೆ ಅನುಮತಿ ಕೊಡಿ ಎಂದು ಕೇಳುತ್ತಲೇ ಇದ್ದೇವೆ. ಮಹದಾಯಿಗೂ ಅನುಮತಿ ಕೇಳಿದ್ದೇವೆ.ಆದರೆ ಕೇಂದ್ರ ಸರ್ಕಾರ ಅನುಮತಿ ಕೊಡದೆ ಅನ್ಯಾಯ ಮಾಡುತ್ತಿದೆ ಎಂದು ಸಿಎಂ ದೂರಿದರು.

ಹೆಚ್ ಡಿ ಕುಮಾರಸ್ವಾಮಿ ಯಾಕೆ ಅನುಮತಿ ಕೊಡಿಸುತ್ತಿಲ್ಲ ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿಯ ಸಂಸದರು ಏಕೆ ರಾಜ್ಯದ ಪರವಾಗಿ ಧ್ವನಿ ಎತ್ತುತ್ತಿಲ್ಲ, ಕರ್ನಾಟಕಕ್ಕೇ ಏಕೆ ಮಲತಾಯಿ ಧೋರಣೆ ಎಂದು ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಕುಡಿಯುವ ನೀರಿನ ಆರನೇ ಹಂತದ ಯೋಜನೆಯಿಂದ 500 ಎಂಎಲ್ ಡಿ ಕುಡಿಯುವ ನೀರು ಬೆಂಗಳೂರಿಗರಿಗೆ ಸಿಗತ್ತದೆ, ಇದನ್ನೂ ನಾವು ಘೋಷಿಸಿದ್ದೇವೆ ನಾವು ಇದನ್ನೂ ಮಾಡಿ ತೋರಿಸುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರಾದ ನರೇಂದ್ರಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಸಚಿವ ಕೆ.ಜೆ.ಜಾರ್ಜ್, ಮಾಜಿ ಸಚಿವ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಶಾಸಕರಾದ ಎಸ್.ಆರ್. ವಿಶ್ವನಾಥ್ , ವಿಧಾನಸಭೆ, ವಿಧಾನಪರಿಷತ್ ಶಾಸಕರುಗಳಾದ ಟಿ.ಎಂ.ನಾಗರಾಜು, ರವಿ, ದಿನೇಶ್ ಗೂಳಿಗೌಡ, ಸುದಾಮ ದಾಸ್, ಮಾದೇಗೌಡರು, ನಾಗರಾಜ್ ಯಾದವ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತುಂಬಿದ ಕೊಡಗಳ ನೀರನ್ನು ಮುಖ್ಯಮಂತ್ರಿಗಳು ಕಾವೇರಿ ಮಾತೆಗೆ ಸಮರ್ಪಿಸಿದರು.

ಜೈಕಾ(ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ) ಸಹಭಾಗಿತ್ವದಲ್ಲಿ 4336 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಯೋಜನೆ ಇದಾಗಿದೆ.


Share this with Friends

Related Post