ಬೆಂಗಳೂರು: ಬೆಂಗಳೂರಿನ 110 ಹಳ್ಳಿಗಳಿಗೆ ನೀರು ಕೊಡುವ ಯೋಜನೆಯ ಕ್ರೆಡಿಟ್ ಬಿಜೆಪಿಯದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿ.ಕೆ.ಹಳ್ಳಿಯಲ್ಲಿ ಇವತ್ತು ಸಿಎಂ,ಡಿಸಿಎಂ ಬೆಂಗಳೂರಿನ 110 ಹಳ್ಳಿಗಳಿಗೆ ನೀರು ಕೊಡುವ ಯೋಜನೆಯನ್ನು ಉದ್ಘಾಟಿಸಿದ್ದಾರೆ. ತಾವೇ ಮುತುವರ್ಜಿ ವಹಿಸಿ ಹಣ ಬಿಡುಗಡೆ ಮಾಡಿ, ಕ್ರಿಯಾ ಯೋಜನೆ ಮಾಡಿ ಕೆಲಸ ಅನುಷ್ಠಾನಕ್ಕೆ ತಂದಿರುವುದಾಗಿ ಜಂಬ ಕೊಚ್ಚಿಕೊಂಡಿದ್ದಾರೆ ಅದು ಹೇಗೆ ಸರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನವರು ಏನೇ ಹೇಳಿದರೂ ಸರ್ಕಾರಿ ದಾಖಲೆಗಳು ಮಾತನಾಡುತ್ತವೆ. 2018 ಜನವರಿ 24ರಂದು ಬಿಜೆಪಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ 5,500 ಕೋಟಿ ಮೊತ್ತದ ಸಾಲದ ಒಪ್ಪಂದಕ್ಕೆ ಸಹಿ ಹಾಕಿದ್ದರು. 90 ತಿಂಗಳೊಳಗೆ ಯೋಜನೆ ಪೂರ್ಣಗೊಳಿಸಲು ಷರತ್ತು ವಿಧಿಸಲಾಗಿತ್ತು. ಓರಿಯೆಂಟಲ್ ಕನ್ಸಲ್ಟೇಶನ್ ಮೊದಲಾದ ಕಂಪನಿಗಳಿಗೆ ಯೋಜನೆ ನಿರ್ವಹಿಸಲು ನೀಡಲಾಗಿತ್ತು ಎಂದು ಹೇಳಿದರು.
ಯೋಜನೆ ಪ್ರಾರಂಭವಾದ ದಿನ 2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಗುತ್ತಿಗೆ ಪ್ಯಾಕೇಜ್ ಮಾಡಿದ್ದು, ಪ್ಯಾಕೇಜ್ 2ರಲ್ಲಿ ನಿತ್ಯ 77.5 ಕೋಟಿ ಲೀಟರ್ ನೀರು ಶುದ್ಧೀಕರಣ ಘಟಕ, ಪ್ಯಾಕೇಜ್ 3ರಲ್ಲಿ ಟಿ.ಕೆ ಹಳ್ಳಿ ಪಂಪಿಂಗ್ ಸ್ಟೇಶನ್, ಪ್ಯಾಕೇಜ್ 4ರಲ್ಲಿ ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ 2 ಪಂಪಿಂಗ್ ಸ್ಟೇಶನ್ ನಿರ್ಮಾಣಕ್ಕೆ, ಟಿಕೆಹಳ್ಳಿ, ಹಾರೋಹಳ್ಳಿವರೆಗೂ ಪೈಪ್‌ಲೈನ್, ಹಾರೋಹಳ್ಳಿಯಿಂದ ವಾಜರಹಳ್ಳಿವರೆಗೂ ಪೈಪ್‌ಲೈನ್, ನಗರದ ಪಶ್ಚಿಮ ಭಾಗದಲ್ಲಿ ಪೈಪ್‌ಲೈನ್, ನೆಲಮಟ್ಟದ ಜಲಾಗಾರ, 13ನೆಯದು ಪಶ್ಚಿಮ ಭಾಗದಲ್ಲಿ ನೆಲಮಟ್ಟದ ಜಲಾಗಾರ ನಿರ್ಮಿಸಲು ಉದ್ದೇಶಿಸಲಾಗಿತ್ತು ಎಂದು ವಿವರಿಸಿದರು.
ಇಷ್ಟಕ್ಕೂ ಹಣ ಪಡೆದು, ಸಾಲ ಪಡೆದು ಜಪಾನ್‌ನ ಕಂಪನಿ, ಓರಿಯೆಂಟಲ್ ಮೊದಲಾದ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಯೋಜನೆಗಳನ್ನು ಕೂಡ ಪ್ರಾರಂಭ ಮಾಡಿದ್ದೆವು ಎಂದು ತಿಳಿಸಿದರು.
ಬಳಿಕ ಬಸವರಾಜ ಬೊಮ್ಮಾಯಿಯವರ ಸರ್ಕಾರ ಬಂತು. ನಾನು ಅದರಲ್ಲಿ ಸಚಿವನಾಗಿದ್ದೆ. ಶೇ 80ರಷ್ಟು ಕೆಲಸವನ್ನು ನಾವೇ ಮಾಡಿದ್ದು.ಕಾಂಗ್ರೆಸ್ ಬಂದು ಒಂದು ವರ್ಷ ಆಗಿದೆ. ಅಲ್ಲಿ ನೆರೆ ಬಂದಾಗ ನಾನು, ಬೊಮ್ಮಾಯಿಯವರು ಭೇಟಿ ಕೊಟ್ಟಿದ್ದೆವು. ಪ್ಯಾಕೇಜ್‌ಗೆ ಡಿಪಿಆರ್ ಮಾಡಿದ್ದು ಯಾರು, ಹಣ ಹೊಂದಿಸಿ ಕೊಟ್ಟದ್ದು ಯಾರು, ಯಾರ ಸರ್ಕಾರದಲ್ಲಿ ಕೆಲಸ ಆರಂಭವಾಯಿತು ಎಂಬುದನ್ನೆಲ್ಲ ಮುಚ್ಚಿಟ್ಟಿದ್ದಾರೆ ಎಂದು ಅಶೋಕ ದೂರಿದರು.