ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಮುಡಾ ಸೈಟ್ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ನೀಡಿದ ದೂರಿನ ಮೇರೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದರು
ಮುಡಾ ಅಧಿಕಾರಿಗಳಿಗೆ ಇಡಿ 3 ಬಾರಿ ನೋಟೀಸ್ ನೀಡಿ, ಒಂದು ಬಾರಿ ಸಮನ್ಸ್ ಕೊಟ್ಟಿತ್ತು, ದಾಖಲಾತಿ ನೀಡುವಂತೆ ಸೂಚಿಸಿತ್ತು.ಆದರೆ ದಾಖಲೆ ಕೊಡದ ಹಿನ್ನೆಲೆಯಲ್ಲಿ ಮುಡಾ ಮೇಲೆ ದಾಳಿ ಮಾಡಲಾಗಿದೆ.
೨೦ ಇಡಿ ಅಧಿಕಾರಿಗಳ ತಂಡ ದಾಳಿಯಲ್ಲಿ ಪಾಲ್ಗೊಂಡಿದ್ದು ಮುಡಾದಲ್ಲಿನ ಸೈಟು ಹಂಚಿಕೆ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಮುಡಾದಲ್ಲಿ ೨ ಸಾವಿರ ಕೋಟಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ದೂರು ದಾಖಲಿಸಿಕೊಂಡು ದಾಖಲಾತಿಗಳಪರಿಶೀಲಿಸುತ್ತಿದ್ದಾರೆ.
ಶನಿವಾರ ಕೂಡಾ ಪರಿಶೀಲನೆ ಮುಂದುವರಿಯಲಿದೆ.
ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರದಲ್ಲಿ ೧೪ ಸೈಟುಗಳನ್ನು ನೀಡಲಾಗಿದೆ ಎಂಬ ಪ್ರಕರಣ ಸೇರಿದಂತೆ ಮುಡಾದಲ್ಲಿ ನಡೆದಿರುವ ಹಗರಣಗಳನ್ನು ಬಗ್ಗೆ ಇಡಿ ತನಿಖೆ ನಡೆಸಲಿದೆ.
ಇದೇ ವೇಳೆ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಮನೆಯ ಮೇಲೂ ಇ.ಡಿ ದಾಳಿ ನಡೆಸಿದೆ.
ದಾಳಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್, ಇಡಿ ಅಧಿಕಾರಿಗಳು ಬೆಳಿಗ್ಗೆ ಕಚೇರಿ ವೇಳೆಯಲ್ಲಿ ಆಗಮಿಸಿದ್ದಾರೆ. ದಾಖಲೆ ಪರಿಶೀಲಿಸುತ್ತಿದ್ದು,ತನಿಖೆ ಕೈಗೊಂಡಿದ್ದಾರೆ. ಅವರು ಕೇಳುವ ಎಲ್ಲಾ ಮಾಹಿತಿಯನ್ನು ನಾವು ಕೊಡುತ್ತೇವೆ ಎಂದು ಹೇಳಿದರು.