Mon. Dec 23rd, 2024

ಕೃಷಿ ಸಚಿವರಿಗೆ ಆರ್.ಅಶೋಕ್ ತಿರುಗೇಟು

Share this with Friends

ಬೆಂಗಳೂರು: ವಿಪಕ್ಷಗಳು ಟೀಕೆ ಮಾಡಿದ ಮೇಲಾದರೂ ಎಚ್ಚೆತ್ತುಕೊಂಡು ಕಾರ್ಯೋನ್ಮುಖರಾಗಬೇಕಲ್ಲವೆ ಎಂದು
ಎಂದು ಪ್ರತಿಪಕ್ಷ ನಾಯಕ ಅಶೋಕ್ ಸಚಿವ ಚಲುವರಾಯಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ಸರ್ಕಾರದ ತಪ್ಪುಗಳು, ಆಡಳಿತದಲ್ಲಿರುವ ನ್ಯೂನ್ಯತೆಗಳನ್ನ ಎತ್ತಿ ತೋರಿಸಿ, ಜನರ ದನಿಯನ್ನ ಸರ್ಕಾರಕ್ಕೆ ತಲುಪಿಸುವುದೇ ವಿರೋಧ ಪಕ್ಷದ ಕೆಲಸ. ವಿರೋಧ ಪಕ್ಷದ ನಾಯಕನಾಗಿ ನಾನು ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಆದರೆ ನೀವು ನಮ್ಮ ಮೇಲೆ ಹರಿಹಾಯುತ್ತೀರಿ ಎಂದು ಟ್ವೀಟ್ ಮಾಡಿ ಅಶೋಕ್‌ ಟೀಕಿಸಿದ್ದಾರೆ.

ನಿಮ್ಮ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುವುದಿರಲಿ. ಸ್ವತಃ ನಿಮ್ಮ ಪಕ್ಷದ ಶಾಸಕರೇ ಅನೇಕ ಸಂದರ್ಭಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ರೈತರ ಪರ ಯಾವುದೇ ವಿಶೇಷ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಸರಕಾರದ ಧೋರಣೆ ನೋಡಿದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎನಿಸುವಷ್ಟು ಬೇಸರವಾಗಿದೆ ಎಂದು ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಇತ್ತೀಚೆಗಷ್ಟೇ ಬೇಸರ ವ್ಯಕ್ತಪಡಿಸಿದ್ದುದು ಗೊತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

ನವಲಗುಂದದ ಶಾಸಕ ಎನ್.ಎಚ್.ಕೋನರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ ಬಹುತೇಕ ರೈತರಿಗೆ ಮುಂಗಾರು ಬರ ಪರಿಹಾರವೇ ವಿತರಣೆ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಅಕಾಲಿಕ ಮಳೆಯಿಂದ ಆಗಿರುವ ಬೆಳೆ ಹಾನಿ ಬಗ್ಗೆ ತಮ್ಮ ಸರ್ಕಾರಕ್ಕೆ ಅರಿವಿದೆ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಉಡಾಫೆ ಮಾತುಗಳು, ಹಾರಿಕೆ ಉತ್ತರಗಳು ರೈತರ ಸಮಸ್ಯೆ ಬಗೆಹರಿಸುವುದಿಲ್ಲ. ಕೃಷಿ ಸಚಿವರಾಗಿ ತಾವು ಎಷ್ಟು ಜಿಲ್ಲೆಗಳಿಗೆ ಭೇಟಿ ನೀಡಿದ್ದೀರಿ, ಯಾವ್ಯಾವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದೀರಿ ಎಂದು ಆರ್.ಅಶೋಕ್ ಕಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹಿಂದೆ ಅನೇಕ ಮುತ್ಸದ್ದಿಗಳು, ಹಿರಿಯರು ನಿರ್ವಹಿಸಿದ ಕೃಷಿ ಇಲಾಖೆಯ ಮಂತ್ರಿ ಆಗಿದ್ದೀರಿ. ಇಲಾಖೆಯ ಗಂಭೀರತೆ ಅರಿತು ಸ್ವಲ್ಪ ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದು ಚಾಟಿ ಬೀಸಿದ್ದಾರೆ.


Share this with Friends

Related Post