Mon. Dec 23rd, 2024

ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಟೀಕೆ

Share this with Friends

ಬೆಂಗಳೂರು: ಸತೀಶ್ ಸೈಲ್ ವಿರುದ್ಧದ ತೀರ್ಪು ಕಾಂಗ್ರೆಸ್ ಸರ್ಕಾರದ ಭ್ರಷ್ಟರೆಲ್ಲರೂ ಅವರ ಹಾದಿಯನ್ನು ಹಿಂಬಾಲಿಸುವ ಸ್ಥಿತಿ ಎದುರಾಗಲಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್​​ ನಲ್ಲಿ ಈ ಕುರಿತು ಬರೆದಿರುವ ಅವರು,ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ತಪ್ಪಿತಸ್ಥರೆಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಈ ನೆಲದ ಕಾನೂನು ಅದೆಷ್ಟು ಗಟ್ಟಿಯಾಗಿದೆ ಎನ್ನುವುದನ್ನು ನಿರೂಪಿಸಿದೆ ಎಂದು ತಿಳಿಸಿದ್ದಾರೆ.

ಈ ತೀರ್ಪು ಮುಡಾ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಗಳಂತಹ ಲೂಟಿಕೋರತನ ಹಾಗೂ ಭ್ರಷ್ಟತೆಯ ಆರೋಪ ಎದುರಿಸುತ್ತಿರುವವರ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಟೀಕಿಸಿದ್ದಾರೆ.

ಅಕ್ರಮ ಅದಿರು ಸಾಗಣೆ ಮಾಡಿ ರಾಜ್ಯದ ಬೊಕ್ಕಸಕ್ಕೆ 200 ಕೋಟಿಗೂ ಹೆಚ್ಚಿನ ನಷ್ಟ ಉಂಟು ಮಾಡಿದ ಆರು ಕ್ರಿಮಿನಲ್ ಆರೋಪಗಳಲ್ಲಿ ದೋಷಿಯಾಗಿ ಜೈಲು ಸೇರಿರುವ ಸತೀಶ್ ಸೈಲ್ ವಿರುದ್ಧ ಬಂದಿರುವ ತೀರ್ಪು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಆರೋಪಿತರಾಗಿರುವ ಕಾಂಗ್ರೆಸ್ ಸರ್ಕಾರದ ಭ್ರಷ್ಟರೆಲ್ಲರೂ ಸತೀಶ್ ಸೈಲ್ ರವರ ಹಾದಿಯನ್ನೇ ಹಿಂಬಾಲಿಸಬೇಕಾದ ಸ್ಥಿತಿ ಎದುರಾಗಲಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂದಿದ್ದಾರೆ.

ಮುಡಾ ಹಗರಣದ ಕುರಿತು ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿಯನ್ನು ಎತ್ತಿ ಹಿಡಿದಿರುವ ಉಚ್ಛ ನ್ಯಾಯಾಲಯದ ಸುದೀರ್ಘ ತೀರ್ಪಿನಲ್ಲಿ ಹಗರಣದ ಕುರಿತಾದ ಉಲ್ಲೇಖಗಳು ಸ್ಪಷ್ಟವಾಗಿ ನಮೂದಾಗಿವೆ. ಈ ನಿಟ್ಟಿನಲ್ಲಿ ಇಡಿ ಹಾಗೂ ಲೋಕಾಯುಕ್ತದಲ್ಲಿ ತನಿಖೆಯೂ ಸಾಗಿದೆ, ಆದರೂ ಭಂಡತನ ಮೆರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ ಸತೀಶ್ ಸೈಲ್ ವಿರುದ್ಧದ ತೀರ್ಪಿನಿಂದಾದರೂ ಎಚ್ಚೆತ್ತುಕೊಂಡು ನೈತಿಕತೆ ಮೆರೆದರೆ ಭವಿಷ್ಯತ್ತಿನಲ್ಲಿ ಅವರು ಕಿಂಚಿತ್ತಾದರೂ ಗೌರವ ಉಳಿಸಿಕೊಳ್ಳಬಹುದು, ಇಲ್ಲದಿದ್ದರೆ ನ್ಯಾಯಾಲಯವೇ ಅವರಿಗೆ ಹಾದಿ ತೋರುವ ಪರಿಸ್ಥಿತಿ ಉದ್ಭವಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ ವಿಜಯೇಂದ್ರ.


Share this with Friends

Related Post