Thu. Oct 31st, 2024

ಸಿ.ಪಿ.ವೈ ಹರಕೆ ಕುರಿ-ಆರ್‌.ಅಶೋಕ ಲೇವಡಿ

Share this with Friends

ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಯೋಗೇಶ್ವರ್‌ ಹರಕೆ ಕುರಿಯಾಗಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ, ಜೆಡಿಎಸ್‌ ಒಟ್ಟಾಗಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ, ಆದರೆ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ಅಭಿಪ್ರಾಯ ಕೇಳದೆ ಸಿ.ಪಿ.ಯೋಗೇಶ್ವರ್‌ ಅವರನ್ನು ಆರಿಸಲಾಗಿದೆ,ಹಾಗಾಗಿ ಕಾಂಗ್ರೆಸ್‌ ಕಾರ್ಯಕರ್ತರು ರೆಬೆಲ್‌ ಆಗಿದ್ದಾರೆ, ಅದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇದರ ಪರಿಣಾಮ ಕಾಂಗ್ರೆಸ್‌ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ, ಎಸ್‌ಸಿ, ಎಸ್‌ಟಿ ಸಮುದಾಯದ ಹಣ ದುರ್ಬಳಕೆಯಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಗಣಿ ಹಗರಣದಲ್ಲಿ ಶಾಸಕ ಸತೀಶ್‌ ಸೈಲ್‌ ತಪ್ಪಿತಸ್ಥರು ಎಂಬುದು ಸಾಬೀತಾಗಿ ಶಿಕ್ಷೆ ನೀಡಲಾಗಿದೆ. ಕಾಂಗ್ರೆಸ್‌ ಲೂಟಿಕೋರರ ಪಾರ್ಟಿ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದರು.

ಗಣಿ ಹಗರಣ ನಡೆದಿದೆ ಎಂದು ಸಿದ್ದರಾಮಯ್ಯನವರು ಪಂಚೆ ಎತ್ತಿಕಟ್ಡಿ ಪಾದಯಾತ್ರೆ ಮಾಡಿ ನೃತ್ಯ ಮಾಡಿದ್ದರು. ಬಳಿಕ ಕಾಲು ನೋವಿಗೆ ಮಸಾಜ್‌ ಮಾಡಿಸಿಕೊಂಡಿದ್ದರು. ಈಗ ಅವರದ್ದೇ ಪಕ್ಷದ ಶಾಸಕ ಗಣಿಯಲ್ಲಿ ಲೂಟಿ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ. ಗಣಿಗಳಲ್ಲಿ ಲೂಟಿ ಮಾಡಿದ್ದು ಕಾಂಗ್ರೆಸ್‌ ಪಕ್ಷ ಎಂಬುದು ಜನರಿಗೆ ಗೊತ್ತಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.

ನಿಖಿಲ್‌ ಕುಮಾರಸ್ವಾಮಿ ಅವರ ಬಗ್ಗೆ ಜನರಿಗೆ ಅನುಕಂಪವಿದೆ. ಸಿ.ಪಿ.ಯೋಗೇಶ್ವರ್‌ ಅವರಿಗೆ ಟಿಕೆಟ್‌ ನೀಡಲು ನಾವೆಲ್ಲರೂ ಪ್ರಯತ್ನ ಮಾಡಿದ್ದೆವು. ಆದರೂ ಅವರು ಪಕ್ಷ ಬಿಟ್ಟು ಕಾಂಗ್ರೆಸ್‌ ಸೇರಿದ್ದಾರೆ. ಬಿಜೆಪಿಯಲ್ಲಿ ಹಿರಿಯ ನಾಯಕರಾಗಿದ್ದವರು ಈಗ ಕಾಂಗ್ರೆಸ್‌ನಲ್ಲಿ ಮೂರನೇ ಸಾಲಿನಲ್ಲಿ ಕುಳಿತಿದ್ದಾರೆ. ಕಾಂಗ್ರೆಸ್‌ ನಾಯಕರು ಅವರನ್ನು ಹರಕೆ ಕುರಿ ಮಾಡಿ ಮುಗಿಸಲಿದ್ದಾರೆ. ಜನರಿಗೆ ಒಳ್ಳೆಯ ನಾಯಕತ್ವ ಬೇಕಾಗಿದೆ. ನಿಖಿಲ್‌ ಕುಮಾರಸ್ವಾಮಿ ಅವರು ಗೆಲ್ಲುವುದು ಸ್ಪಷ್ಟ,
ಬಿಜೆಪಿಯ ಎಲ್ಲ ಕಾರ್ಯಕರ್ತರು ಹಾಗೂ ನಾಯಕರು ಪಣ ತೊಟ್ಟು ಕೆಲಸ ಮಾಡುತ್ತೇವೆ ಎಂದು ಅಶೋಕ್ ತಿಳಿಸಿದರು.


Share this with Friends

Related Post