ಮೈಸೂರು: ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ವಿರುದ್ಧ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಲಘುವಾಗಿ ಮಾತನಾಡಿದ್ದಾರೆಂದು ಮೈಸೂರು ನಗರ, ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ತುಳು ಶಿವಳ್ಳಿ ಬ್ರಾಹ್ಮಣ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಮೈಸೂರು ಜಿಲ್ಲಾ, ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಹಾಗೂ ತುಳು ಶಿವಳ್ಳಿ ಬ್ರಾಹ್ಮಣ ಸಂಘದ ಅಧ್ಯಕ್ಷ ರವಿ ಶಾಸ್ತ್ರಿ ಅವರು ಕಿಡಿ ಕಾರಿದ್ದಾರೆ.
ಜಾತಿ ಗಣತಿ ವಿಚಾರದಲ್ಲಿ ಪೇಜಾವರ ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಹರಿಪ್ರಸಾದ್ ಅವರು ಸ್ವಾಮಿಗಳ ಬಗ್ಗೆ ಅತ್ಯಂತ ಲಘುವಾಗಿ ಮಾತನಾಡಿದ್ದು ಅವರ ಹಿರಿತನದ ರಾಜಕೀಯ ನಾಯಕತ್ವಕ್ಕೆ ಕುಂದು ತಂದಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸಮಾಜದ ಒಂದು ಉನ್ನತ ಪೀಠದ ಸ್ವಾಮಿಗಳಿಗೆ ತಮ್ಮ ರಾಜಕೀಯ ಲಾಭಕ್ಕೆ ಕ್ಷುಲ್ಲಕ ಹೇಳಿಕೆ ನೀಡಿರುವುದು ಮುಂದೆ ಅವರ ವೈಯಕ್ತಿಕ ಘನತೆಗೆ ಮತ್ತು ಪಕ್ಷಕ್ಕೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಎಚ್ಚರಿಸಿದ್ದಾರೆ.
ಕೂಡಲೇ ಹರಿಪ್ರಸಾದ್ ಅವರು ಸ್ವಾಮಿಗಳ ಮತ್ತು ಬ್ರಾಹ್ಮಣ ಸಮಾಜದ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು
ಡಿ ಟಿ ಪ್ರಕಾಶ್ ಮತ್ತು ರವಿಶಾಸ್ತ್ರಿ
ಎಚ್ಚರಿಸಿದ್ದಾರೆ.