Mon. Dec 23rd, 2024

ಯತ್ನಾಳ್‌ ಉಚ್ಛಾಟನೆಗೆ ಬಿಜೆಪಿ ಕಾರ್ಯಕರ್ತರ ಒತ್ತಾಯ

Share this with Friends

ಮೈಸೂರು: ರಾಜ್ಯ ಬಿಜೆಪಿಯಲ್ಲಿ ಬಣ ಹೊಡೆದಾಟ ಜೋರಾಗಿದ್ದರೆ ಇತ್ತ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನ ಪಕ್ಷದಿಂದ ಉಚ್ಛಾಟಿಸಬೇಕೆಂದು ಮೈಸೂರಲ್ಲಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ಮಾಜಿ ಸಚಿವ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿ.ಸಿ ಪಾಟೀಲ್, ಹಾಲಪ್ಪ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ನಾಯಕರು ಮಾತನಾಡುತ್ತಿದ್ದಾಗಲೇ ಯತ್ನಾಳ್ ನ ಉಚ್ಚಾಟಿಸಿ, ಬರೀ ಸುದ್ದಿಗೋಷ್ಠಿ ಮಾಡಿ ಏನೂ ಪ್ರಯೋಜನವಿಲ್ಲ ಎಂದು ಕಾರ್ಯಕರ್ತರು ಗದ್ದಲ ಎಬ್ಬಿಸಿದರು.ಜತೆಗೆ ಯತ್ನಾಳ್‌ ವಿರುದ್ಧ ಧಿಕ್ಕಾರ ಕೂಗಿ, ಮೊದಲು ಅವರನ್ನ ಪಕ್ಷದಿಂದ ಕಿತ್ತುಹಾಕಿ ಎಂದು ಆಕ್ರೋಶದಿಂದ ಆಗ್ರಹಿಸಿದರು.

ಸದ್ಯ ವಕ್ಫ್‌ ವಿರೋಧಿ ಹೋರಾಟದಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನಕ್ಕಾಗಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿದ್ದು, ಡಿ.3ರಂದು ಕೋರ್ ಕಮಿಟಿ ಸಭೆ ನಿಗದಿ ಮಾಡಿದೆ. ಅಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ತರುಣ್ ಚುಗ್ ರಾಜ್ಯಕ್ಕೆ ಬರಲಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ಹಾಗೂ ವಕ್ಫ್ ಅಭಿಯಾನ ಕೈಗೊಂಡಿರುವ ಯತ್ನಾಳ್ ಬಣದಿಂದ ಮಾಹಿತಿ ಸಂಗ್ರಹಿಸಲಿದ್ದಾರೆ. ತರುಣ್ ಚುಗ್ ವರದಿ ಆಧರಿಸಿ ದೆಹಲಿ ನಾಯಕರು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಹೈಕಮಾಂಡ್‌ ಹೇಳಿದೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ನಾಯಕರು ಕಾರ್ಯಕರ್ತರನ್ನ ಸಮಾಧಾನ ಪಡಿಸಲು ಯತ್ನಿಸಿದರು.

ಇತ್ತೀಚೆಗೆ ವಿಜಯಪುರ ಸೇರಿದಂತೆ 5 ಜಿಲ್ಲೆಗಳಲ್ಲಿ ವಕ್ಫ್‌ ವಿರುದ್ಧ ಹೋರಾಟ ಹಮ್ಮಿಕೊಂಡಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ, ಹಿರಿಯ ನಾಯಕ ಡಿ.ವಿ ಸದಾನಂದಗೌಡ ಸೇರಿದಂತೆ ಹೈಕಮಾಂಡ್‌ ವಿರುದ್ಧ ಸರಣಿ ವಾಗ್ದಾಳಿ ನಡೆಸಿದ್ದರು.

ಇದರ ಮಧ್ಯೆ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅವರು ವಿಜಯೇಂದ್ರ ಪರ ಬ್ಯಾಟಿಂಗ್‌ ಮಾಡಿ, ಯತ್ನಾಳ್‌ರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಯತ್ನಾಳ್‌ ವಿಚಾರವಾಗಿ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಯುತ್ತಿದ್ದ ವೇಳೆ ಕಾರ್ಯಕರ್ತರು ಪಕ್ಷದಿಂದ ಉಚ್ಚಾಟಿಸುವಂತೆ ಒತ್ತಾಯಿಸಿದ್ದಾರೆ.

ಮುಂದೇನಾಗಲಿದೆಯೊ ಕಾದು ನೋಡಬೇಕಿದೆ.


Share this with Friends

Related Post