Mon. Dec 23rd, 2024

ಲೋಕಾಯುಕ್ತಕ್ಕೆ ಇಡಿ ಪತ್ರ ದುರುದ್ದೇಶ ಪೂರಿತ- ಸಿಎಂ ಸಿದ್ದರಾಮಯ್ಯ

Share this with Friends

ಮಂಡ್ಯ: ಹೈಕೋರ್ಟ್ ನಲ್ಲಿ ನಮ್ಮ‌ ಅರ್ಜಿ ವಿಚಾರಣೆಗೆ ಬರುವ ಹಿಂದಿನ‌ ದಿನ ಇಡಿ ಯವರು ಲೋಕಾಯುಕ್ತಕ್ಕೆ ಪತ್ರ ಬರೆದಿರುವುದು ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ಕೆ.ಆರ್.ಪೇಟೆ ಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಸಿಎಂ,ಇಡಿ ಯವರು ತನಿಖೆ ನಡೆಸುತ್ತಿದ್ದಾರೆ,ಇವರು ತನಿಖೆ ನಡೆಸುತ್ತಿರುವುದೇ ಸರಿಯಲ್ಲ,ಆಗಲಿ, ತನಿಖೆ ನಡೆಸಿದ ಮೇಲೆ ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ನೀಡಬಹುದಿತ್ತು. ಆದರೆ ಹಾಗೆ ಮಾಡದೆ ಲೋಕಾಯುಕ್ತಕ್ಕೆ ಪತ್ರ ಬರೆಯುವುದು ಮತ್ತು ಮಾಧ್ಯಮಗಳಿಗೆ ಸೋರಿಕೆ ಮಾಡುವುದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದು ಬೇಸರ‌ ವ್ಯಕ್ತಪಡಿಸಿದರು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಗುರುವಾರ ನಮ್ಮ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರುತ್ತಿದೆ. ಇದಕ್ಕೆ ಒಂದು ದಿನ ಮೊದಲು ಮಾಧ್ಯಮಗಳಲ್ಲಿ ಪ್ರಚಾರ ಮಾಡಿರುವುದರ ಹಿಂದೆ ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಮತ್ತು ನ್ಯಾಯಾಲಯವನ್ನು ಪೂರ್ವಾಗ್ರಹದ ನಿಲುವಿಗೆ ತರುವ ದುರುದ್ದೇಶದ ರಾಜಕೀಯ ನಡೆಯಾಗಿದೆ ಎಂದು ದೂರಿದರು.

ಡಿಸೆಂಬರ್ 24 ರ ಒಳಗೆ ತನಿಖೆಯ ವರದಿ ನೀಡುವಂತೆ ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಬೇಕಿದ್ದರೆ ಇಡಿ ಯವರು ಲೋಕಾಯುಕ್ತಕ್ಕೆ ವರದಿ ನೀಡಲು ಅವಕಾಶವಿತ್ತು. ಅದನ್ನು ಬಿಟ್ಟು ಈ ರೀತಿ ಮಾಡಿರುವುದರ ಹಿಂದಿನ ಉದ್ದೇಶ ರಾಜ್ಯದ ಜನರಿಗೆ ಅರ್ಥವಾಗುತ್ತದೆ ಎಂದು ಸಿಎಂ ಹೇಳಿದರು.

ಮಂತ್ರಿ ಮಂಡಲ ಪುನಾರಚನೆ ಬಗ್ಗೆ ಕೇಳಿದ ಪ್ರಶ್ನೆಗೆ,ಮಂತ್ರಿಮಂಡಲ ಪುನಾರಚನೆ ಮಾಡ್ತೀವಿ ಅಂತ ನಾನು ಹೇಳಿದ್ನಾ, ನೀವೇ ಕಲ್ಪಿಸಿಕೊಂಡು ಸುದ್ದಿ ಮಾಡಿದ್ರಿ. ಈಗ ನನ್ನ ಬಳಿ ಉತ್ತರ ಕೇಳಿದರೆ ಹೇಗೆ ಈ ಬಗ್ಗೆ ಹೈ ಕಮಾಂಡ್ ಕೂಡ ಸೂಚನೆ ಕೊಟ್ಟಿಲ್ಲ ಎಂದು ಸಿಎಂ ಹೇಳಿದರು.

ಹಾಸನದಲ್ಲಿ ನಡೆಯುತ್ತಿರುವ ಸಮಾವೇಷದ ಬಗ್ಗೆ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಪಕ್ಷದಿಂದ ಸಮಾವೇಷ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಚಿವರಾದ ಕೆ.ಎನ್.ರಾಜಣ್ಣ, ಚಲುವರಾಯಸ್ವಾಮಿ ಮತ್ತು ಶಾಸಕರುಗಳು ಹಾಜರಿದ್ದರು.


Share this with Friends

Related Post