ಮೈಸೂರು: ಸಾಹಸ ಸಿಂಹ, ಕನ್ನಡಿಗರ ಕಣ್ಮಣಿ ಡಾ. ವಿಷ್ಣುವರ್ಧನ್ ಮಾನವೀಯ ಮೌಲ್ಯಗಳ ಹರಿಕಾರ ಎಂದು
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಬಣ್ಣಿಸಿದರು.
ಮೈಸೂರಿನಲ್ಲಿ ಪಾತಿ ಫೌಂಡೇಶನ್ ವತಿಯಿಂದ ಸಾಹಸಸಿಂಹ ವಿಷ್ಣುವರ್ಧನ್ ರವರ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಸಾಹಸಸಿಂಹ ವಿಷ್ಣುವರ್ಧನ್ ನಟಿಸಿರುವ ಚಿತ್ರಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ ಉತ್ತಮ ನಟನೆಯ ಮೂಲಕ ಜನ ಮಾನಸದಲ್ಲಿ ವಿಷ್ಣು ಇನ್ನೂ ಅಚ್ಚ ಹಸಿರಾಗಿದ್ದಾರೆ ಎಂದು ಹೇಳಿದರು.
ಪಾತಿ ಫೌಂಡೇಶನ್ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ ಮಾತನಾಡಿ,
ನಟರಾದ ಡಾ.ರಾಜ್‍ಕುಮಾರ್, ವಿಷ್ಣು ವರ್ಧನ್, ಅಂಬರೀಶ್ ಅವರು ಸಿನಿಮಾಗಳ ಮೂಲಕ ಸಮಾಜಕ್ಕೆ ಹಲವು ಒಳ್ಳೆಯ ಸಂದೇಶಗಳನ್ನು ನೀಡಿದ್ದಾರೆ ಆವುಗಳನ್ನು ಜನರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
30ಕ್ಕೂ ಹೆಚ್ಚು ಹಾಡುಗಳನ್ನು ಹಿರಿಯ ಕಲಾವಿದ ಡಾ ಎ ಡಿ ಶ್ರೀನಿವಾಸ್ ತಂಡದವರು ಹಾಡಿದರು.
ಅದಕ್ಕೂ ಮುನ್ನ ವಿಷ್ಣುವರ್ಧನ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಪೂಜ್ಯ ಇಳೈಆಳ್ವಾರ್ ಸ್ವಾಮೀಜಿ ಅವರು ಉದ್ಘಾಟಿಸಿ ಶುಭ ಕೋರಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ವೈ ಡಿ ರಾಜಣ್ಣ, ಹಿರಿಯ ಸಮಾಜಸೇವಕರಾದ ಕೆ ರಘುರಾಮ್ ವಾಜಪೇಯಿ,ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ನಿರ್ದೇಶಕ ಶಿವಪ್ರಸಾದ್, ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ಕಲಾವಿದರಾದ ಆನಂದ್, ಟಿ ಎಸ್ ಅರುಣ್ ಮತ್ತಿತರರು ಪಾಲ್ಗೊಂಡಿದ್ದರು.