Sun. Dec 22nd, 2024

ಕರ್ನಾಟಕದ ಮಾಜಿ ಸಿಎಂ ಎಸ್ ಎಂ ಕೃಷ್ಣ ವಿಧಿವಶ

Share this with Friends

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಎಸ್‌.ಎಂ. ಕೃಷ್ಣ (92) ಅವರು ಮಂಗಳವಾರ ಮುಂಜಾನೆ ವಿಧಿವಶರಾಗಿದ್ದಾರೆ.

ಮಂಗಳವಾರ ನಸುಕಿನ ಜಾವ 2 ಗಂಟೆಗೆ ಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು, ಉಸಿರಾಟದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ವೈದ್ಯರಿಗೆ ಕುಟುಂಬಸ್ಥರು ಮಾಹಿತಿ ನೀಡಿದರು,ತಕ್ಷಣ ವೈದ್ಯರು ಮನೆಗೆ ಧಾವಿಸಿ ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದಾರೆ,ಆದರೆ 3.30ಕ್ಕೆ ವೈದ್ಯರು ಎಸ್‌ಎಂ ಕೃಷ್ಣ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಇಡೀ ದಿನ ಸದಾಶಿವನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಹುಟ್ಟೂರು ಮದ್ದೂರಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ.

ಸದಾಶಿವನಗರ ಎಸ್ ಎಂ ಕೃಷ್ಣ ಮನೆ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಇತ್ತೀಚೆಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದವ ಕೃಷ್ಣ ಅವರು ಮೇ 1, 1932ರಲ್ಲಿ ಜನಿಸಿದ್ದರು. ಎಸ್.ಸಿ‌.ಮಲ್ಲಯ್ಯ ಮತ್ತು ತಾಯಮ್ಮ ತಂದೆ,ತಾಯಿ.

2023ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಕೃಷ್ಣ ವಿಧಾನಸಭೆ ಸ್ಪೀಕರ್, ಉಪಮುಖ್ಯಮಂತ್ರಿ, ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

2017 ರಲ್ಲಿ ಕಾಂಗ್ರೆಸ್ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ಕೃಷ್ಣ ಅವರು ಕೆಲವೇ ದಿನಗಳಲ್ಲಿ ಬಿಜೆಪಿಗೆ ಸೇರಿದ್ದರು. 2023ರ ಜನವರಿ 7 ರಂದು ಕೃಷ್ಣ ಅವರು ತಮ್ಮ 60 ವರ್ಷಗಳ ಸುರ್ಧೀಘ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು.

ಸೋಮನಹಳ್ಳಿಯಲ್ಲಿ ಕೃಷ್ಣ ಅಂತ್ಯಕ್ರಿಯೆ: ಮಾಜಿ ಮುಖ್ಯ ಮಂತ್ರಿ ಎಸ್‌ಎಂ ಕೃಷ್ಣ ಅವರ ಅಂತ್ಯಕ್ರಿಯೆಯ ಬುಧವಾರ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಡೆಯಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ.

ನಾಳೆ ಬೆಳಗ್ಗೆ ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಸೋಮನಹಳ್ಳಿಗೆ ತರಲಾಗುತ್ತದೆ.ಅಲ್ಲಿನ ಶಾಲೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ, ಮಧ್ಯಾಹ್ನದ ನಂತರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂತಾಪ: ಎಸ್.ಎಂ ಕೃಷ್ಣ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ,ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ಮುಖ್ಯ ಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್,ಸ್ಪೀಕರ್ ಯು.ಟಿ.ಖಾದರ್,ಸಭಾಪತಿ ಬಸವರಾಜ ಹೊರಟ್ಟಿ, ‌ರಾಜ್ಯದ ಸಚಿವರು,ವಿಧಾನಸಭೆ ಮತ್ತು ವಿಧಾನ ಪರಿಷತ್ ಶಾಸಕರು,
ಕೇಂದ್ರ ಸಚಿವರುಗಳಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ ಜೋಶಿ,ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.


Share this with Friends

Related Post