Sun. Dec 22nd, 2024

ಭಗವದ್ಗೀತೆ ಮಾರ್ಗದರ್ಶಕ ಶಕ್ತಿ: ದತ್ತ ವಿಜಯಾನಂದ ತೀರ್ಥಶ್ರೀ

Share this with Friends

ಮೈಸೂರು: ಭಗವದ್ಗೀತೆ ಕೇವಲ ಒಂದು ಧಾರ್ಮಿಕ ಗ್ರಂಥವಷ್ಟೇ ಅಲ್ಲ, ಅದು ಜೀವನದ ಮಾರ್ಗದರ್ಶಕ ಶಕ್ತಿ ಎಂದು‌ ಶ್ರೀ ಅವಧೂತದತ್ತ ಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.

ಮಹರ್ಷಿ ಪಬ್ಲಿಕ್ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ “ಕೃಷ್ಣನ ಕರೆ” ವಿಶಿಷ್ಟ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು

ಇಂದು ಯುವ ಪೀಳಿಗೆಯ ಮೇಲೆ ಅತ್ಯಧಿಕ ಒತ್ತಡ ಮತ್ತು ಸಂಕಷ್ಟಗಳಿವೆ. ಇಂತಹ ಸಮಯದಲ್ಲಿ ಗೀತೆಯ ಪಾಠಗಳು ಜೀವನದ ಸವಾಲುಗಳಿಗೆ ಸಮರ್ಥವಾಗಿ ನಿಲ್ಲಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಭಗವದ್ಗೀತೆಯಲ್ಲಿ ಅರ್ಜುನನ ಮೂಲಕ ನಮಗೆ ಜೀವನದ ತತ್ವಶಾಸ್ತ್ರವನ್ನು ಶ್ರೀಕೃಷ್ಣನು ನೀಡಿರುವುದು, ಇದನ್ನು ಪ್ರತಿ ವಿದ್ಯಾರ್ಥಿ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಹೇಳಿದರು.

ಈ ಪವಿತ್ರ ಪಾರಾಯಣದಲ್ಲಿ 6000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುವುದು ಅತ್ಯಂತ ಸಂತೋಷದ ವಿಷಯ ಎಂದು ಹೇಳಿದ ವಿಜಯಾನಂದ ತೀರ್ಥ ಶ್ರೀಗಳು ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಪ್ರಮುಖ ಅಧ್ಯಾಯಗಳ ಸಾರವನ್ನು ತಿಳಿಸಿಕೊಟ್ಟು, ಪಾರಾಯಣದ ಮಹತ್ವವನ್ನು ವಿವರಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್. ವಿ. ರಾಜೀವ ಮಾತನಾಡಿ , ಭಗವದ್ಗೀತೆಯಂತಹ ಮಹತ್ವದ ಗ್ರಂಥಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದು ಅವಶ್ಯಕ ಎಂದು ಹೇಳಿದರು.

ಇದು ಜೀವನದ ತತ್ವಗಳು, ಸತ್ಯಾಸತ್ಯಗಳು, ಮತ್ತು ಧಾರ್ಮಿಕ ಶ್ರದ್ಧೆಯನ್ನು ತೋರಿಸುವಲ್ಲಿಯೂ ಪಾಠವಾಗುತ್ತದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ನೀಡುವ ಅದ್ಭುತ ವೇದಿಕೆಯಾಗಿದೆ,ಮಹರ್ಷಿ ಪಬ್ಲಿಕ್ ಶಾಲೆ ಈ ರೀತಿಯ ಕಾರ್ಯಕ್ರಮ ಆಯೋಜಿಸಿರುವುದು ಇತರ ಶಾಲೆಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ 6000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಗವದ್ಗೀತಾ ಪಾರಾಯಣ ಮಾಡಿದುದು ಆಧ್ಯಾತ್ಮಿಕ ಚೈತನ್ಯವನ್ನು ಹರಡಿತು.

ಈ ಕಾರ್ಯಕ್ರಮದಲ್ಲಿ ಎಚ್. ಎಂ. ನಾಗರಾಜ ರಾವ್ (ಕಲ್ಕಟ್ಟೆ), ಮುರಳೀಧರ ಶರ್ಮಾ,ಆತ್ಮನಿರತಾಮೃತ ಚೈತನ್ಯ ಸ್ವಾಮೀಜಿಯವರು, ಮಹರ್ಷಿ ಪಬ್ಲಿಕ್ ಶಾಲೆಯ ಮುಖ್ಯಸ್ಥ ಭವಾನಿ ಶಂಕರ್ ಹಾಗೂ ತೇಜಸ್ ಶಂಕರ್ ಭಾಗವಹಿಸಿದ್ದರು.


Share this with Friends

Related Post