ಬಾಗಲಕೋಟೆ: ಮಾಧ್ಯಮದವರು ಇಲ್ಲದೇ ಇದ್ದಿದ್ದರೆ ಸಿ.ಟಿ ರವಿ ಅವರನ್ನ ಫೇಕ್ ಎನ್‌ಕೌಂಟರ್ ಮಾಡುವಂತಹ ವಿಚಾರ ಅಲ್ಲಿನ ಪೊಲೀಸ್ ತಂಡಕ್ಕೆ ಇತ್ತು ಅನ್ನಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.
ಸಿ.ಟಿ ರವಿ ಅವರನ್ನು ಬಂಧಿಸಿದ್ದ ವಿಚಾರ ಕುರಿತು ಬಾಗಲಕೋಟೆಯಲ್ಲಿ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಅವರು, ಅವಕಾಶ ಸಿಕ್ಕಿದ್ದರೆ ಸಿ.ಟಿ ರವಿ ಅವರನ್ನು ಮುಗಿಸಬೇಕು ಅಂತಾ ಯೋಚನೆ ಮಾಡಿದ್ದರೇನೊ ಅನ್ನಿಸ್ತಿದೆ, ಆದರೆ ಅವರಿಗೆ ಸರಿಯಾದ ಅವಕಾಶ ಸಿಕ್ಕಿಲ್ಲ,ಏಕೆಂದರೆ ಆಗ ನಮ್ಮ ಮತ್ತೊಬ್ಬರು ಎಂಎಲ್‌ಸಿ ಕೇಶವ್ ಪ್ರಸಾದ್ ಜೊತೆಯಲ್ಲಿದ್ದರು. ಮಾಧ್ಯಮದವರಿಂದ ನಮಗೆ ಲೈವ್ ಲೊಕೇಶನ್ ಸಿಗ್ತಾ ಇತ್ತು ಎಂದು ಹೇಳಿದ್ದಾರೆ.
ನಿಜ ಹೇಳಬೇಕಂದರೆ ನಾವು ಮಾಧ್ಯಮದವರಿಗೆ ಧನ್ಯವಾದ ಹೇಳಬೇಕು. ಅಷ್ಟು ರಾತ್ರಿಯಲ್ಲೂ ಪೊಲೀಸರ ಬೆನ್ನತ್ತಿ, ವಿಡಿಯೋ ಮಾಡಿ, ಲೈವ್ ಲೊಕೇಶನ್ ಹಾಕ್ತಾ ಇದ್ರು ಹಾಗಾಗಿ ಸಿ.ಟಿ ರವಿ ಅವರನ್ನ ಮುಗಿಸಲು ಅವಕಾಶ ಸಿಕ್ಕಿರಲಿಲ್ಲ ಎಂದು ತಿಳಿಸಿದ್ದಾರೆ.
ಇದು ಸಂಪೂರ್ಣವಾಗಿ ಗೃಹ ಇಲಾಖೆಯ ವೈಫಲ್ಯ, ಹಾಗಾಗಿ ನಾವು ಈ ವಿಷಯವನ್ನ ಇಲ್ಲಿಗೆ ಬಿಡುವುದಿಲ್ಲ,ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಜೋಶಿ ಹೇಳಿದರು.
ಈಗಾಗಲೇ ನಾನು, ಸಿ.ಟಿ ರವಿ ಅವರಿಗೆ ಸೂಕ್ತ ಕಾನೂನು ಸಲಹೆ ಪಡೆಯುವಂತೆ ಹೇಳಿದ್ದೇನೆ. ಈ ಕುತಂತ್ರದ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ಆಗಬೇಕು,ಅದಕ್ಕಾಗಿ ನಾವು ಕೋರ್ಟ್‌ಗೆ ಹೋಗುತ್ತೇವೆ ಎಂದು ತಿಳಿಸಿದರು.
ಸಿ.ಟಿ ರವಿ ಅವಹೇಳನಕಾರಿ ಶಬ್ದ ಬಳಸಿದಕ್ಕೆ ಎನ್ಕೌಂಟರ್ ಮಾಡಹೊರಟ್ಟಿದ್ದಾ ಎಂಬ ಪ್ರಶ್ನೆಗೆ, ಅದೊಂದೇ ಕಾರಣ ಅಂತ ಹೇಳೋದಿಲ್ಲ. ಈ ರೀತಿ ಒಬ್ಬರನ್ನ ಎನ್‌ಕೌಂಟರ್ ಮಾಡಿದರೆ ಬಿಜೆಪಿನೋರು ಮುಂದೆ ಯಾವುದೇ ಚಟುವಟಿಕೆ ಮಾಡದೆ ಹೆದರಿ ಮೂಲೆ ಸೇರುತ್ತಾರೆ ಅಂತ ಭಯ ಸೃಷ್ಟಿ ಮಾಡುವ ಪ್ರಯತ್ನ ಇರಬಹುದು ಎಂದು ಮಾರ್ಮಿಕವಾಗಿ ನುಡಿದರು.
ಪೊಲೀಸರು ರಾಜಕೀಯ ಕೈಗೊಂಬೆಗಳಾಗಿ ವರ್ತಿಸಬಾರದು,ಏಕೆಂದರೆ ಮುಂದೆ ಸರ್ಕಾರ ಬದಲಾಗುತ್ತೆ, ಅಧಿಕಾರಕ್ಕೆ ಯಾರು ಬರುತ್ತಾರೊ, ಚೇಂಜ್ ಆಗುತ್ತಾ ಇರುತ್ತೆ ಎಂಬುದನ್ನ ನೆನಪಿಟ್ಟುಕೊಳ್ಳಬೇಕು ಎಂದು ಕಟು ಎಚ್ವರಿಕೆ ನೀಡಿದರು ಪ್ರಹ್ಲಾದ ಜೋಶಿ.