Mon. Dec 30th, 2024

ಸಕಲ ಸರ್ಕಾರಿ ಗೌರವದೊಂದಿಗೆ ಮನಮೋಹನ್‌ ಸಿಂಗ್‌ ಅಂತ್ಯಕ್ರಿಯೆ

Share this with Friends

ನವದೆಹಲಿ: ಸಕಲ ಸರ್ಕಾರಿ ಗೌರವಗಳೊಂದಿಗೆ ಸಿಖ್‌ ಸಂಪ್ರದಾಯದಂತೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಇದಕ್ಕೂ ಮುನ್ನ ಡಾ. ಸಿಂಗ್‌ ಅವರಿಗೆ ಮೂರು ಸೇನಾ ಪಡೆಗಳು ಗೌರವ ಸಮರ್ಪಣೆ ಮಾಡಿದವು.

ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಮನಮೋಹನ್‌ ಸಿಂಗ್‌ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವನ್ನಿರಿಸಿ ಗೌರವ ನಮನ ಸಲ್ಲಿಸಿದರು.

ಬಳಿಕ ಸಿಂಗ್‌ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ನಡುವೆ ಮನಮೋಹನ್‌ ಸಿಂಗ್‌ ಅಮರ್‌ ರಹೇ.. ಅಮರ್‌ ರಹೇ ಎಂದು ಘೋಷಣೆ ಕೂಗಲಾಯಿತು. ನಂತರ ಸಿಖ್‌ ಸಂಪ್ರದಾಯದ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನಡೆಯಿತು.

ಉಪರಾಷ್ಟ್ರಪತಿ ಜಗದೀಪ್‌ ಧನಕರ್, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌,‌ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವರಾದ ಹೆಚ್‌.ಕೆ.ಪಾಟೀಲ್‌, ಎಂ.ಬಿ.ಪಾಟೀಲ್‌, ಹೆಚ್‌.ಸಿ.ಮಹದೇವಪ್ಪ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಆರ್‌.ವಿ.ದೇಶಪಾಂಡೆ ಮುಂತಾದವರು ಮನಮೋಹನ್‌ ಸಿಂಗ್‌ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಅಂತ್ಯಕ್ರಿಯೆಗೂ ಮುನ್ನ ಬೆಳಗ್ಗೆ 8 ಗಂಟೆಗೆ ದೆಹಲಿಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ಸಿಂಗ್‌ ಅವರ ಪಾರ್ಥಿವ ಶರೀರವನ್ನು ಇರಿಸಿ ಸಾರ್ವಜನಿಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.


Share this with Friends

Related Post