Sat. Jan 4th, 2025

ಹೊಸ ವರ್ಷದ‌ ದಿನ ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ಎಲ್ಲಾ ಸೌಲಭ್ಯ ಒದಗಿಸಿ:ಡಿಸಿ ಸೂಚನೆ

Share this with Friends

ಮೈಸೂರು: ಹೊಸ ವರ್ಷದ ದಿನ ತಾಯಿ ದರ್ಶನ ಪಡೆಯಲು ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಎಲ್ಲಾ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಸೂಚಿಸಿದ್ದಾರೆ.

ಸೋಮವಾರ ಜಿಲ್ಲಾ ಪಂಚಾಯತ್ ನಲ್ಲಿ ಈ‌ ಬಗ್ಗೆ ಪೂರ್ವಭಾವಿ ಸಭೆ ನಡೆಸಿ ಅವರು ಹಲವು ಸೂಚನೆಗಳನ್ನು ನೀಡಿದರು.

ಚಾಮುಂಡಿ ತಾಯಿಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದು, ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಮೂಲಭೂತ ಸೌಲಭ್ಯ ಒದಗಿಸಲು ಸಿದ್ಧತೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಪೊಲೀಸ್ ಅಧಿಕಾರಿಗಳು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬಂದೋಬಸ್ ವ್ಯವಸ್ಥೆ ಮಾಡಬೇಕು, ವಾಹನ ಸಂಚಾರ ನಿಯಂತ್ರಣ ಮಾಡುವುದರ ಮೂಲಕ ಚಾಮುಂಡಿ ಬೆಟ್ಟ ರಸ್ತೆ ಮಾರ್ಗದ ಮೂಲಕ ಪ್ರವೇಶಿಸುವ ಎಲ್ಲಾ ಗೇಟ್ ಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು,ಜತೆಗೆ ಚಾಮುಂಡಿ ಬೆಟ್ಟಕ್ಕೆ ಹೊಸವರ್ಷದ ದಿನ ಮಾತ್ರ ಆಟೋಗಳ ಪ್ರವೇಶ ನಿರ್ಬಂಧಿಸಬೇಕು ಎಂದು ಸೂಚಿಸಿದರು.

ಆಟೋಗಳ ಪ್ರವೇಶವನ್ನು ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಅಗತ್ಯಕ್ಕೆ ಅನುಗುಣವಾಗಿ ಬಸ್ ಗಳನ್ನು ನಿಯೋಜಿಸಿ ಭಕ್ತಾದಿಗಳಿಂದ ಟಿಕೆಟ್ ಪಡೆದುಕೊಳ್ಳಬೇಕು ಎಂದು ಲಕ್ಷ್ಮಿಕಾಂತರೆಡ್ಡಿ ಸಲಹೆ ನೀಡಿದರು.

ನಗರದ ಇತರೆ ಪ್ರದೇಶಗಳಿಂದಲೂ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಮತ್ತು ನಗರ ಬಸ್ ನಿಲ್ದಾಣ ಹಾಗೂ ರೈಲ್ವೆ ಸ್ಟೇಷನ್ ನಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಹೊಸವರ್ಷದ ದಿನದಂದು ಸಾರ್ವಜನಿಕರಿಗೆ ಬೆಳಗ್ಗೆ 6.30 ರಿಂದಲೇ ತಾವರೆ ಕೆರೆ ಗೇಟ್ ತೆರೆದಿರಲಾಗುತ್ತದೆ, ಭಕ್ತರು ಪಾರ್ಕಿಂಗ್ ಸ್ಥಳದಿಂದಲೇ ಸರದಿ ಸಾಲಿನಲ್ಲಿ ದೇವಸ್ಥಾನಕ್ಕೆ ಆಗಮಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Share this with Friends

Related Post