ಬೆಂಗಳೂರು, ಫೆ.23: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅತಿ ಹೆಚ್ಚು ಅನುದಾನ ಬಂದಿದ್ದು, ಈ ಕುರಿತು ಅಭಿನಂದನೆ ಸಲ್ಲಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು
ಕೇಂದ್ರವನ್ನು ದೂಷಿಸುವ ಪ್ರವೃತ್ತಿಯನ್ನು ಕೈ ಬಿಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ರಾಜ್ಯಕ್ಕೆ ಬಂದಿದೆ. ರೈಲ್ವೆ, ಗ್ರಾಮೀಣಾಭಿವೃದ್ಧಿ, ವಿಮಾನ ನಿಲ್ದಾಣ, ಹೆದ್ದಾರಿ ಸೇರಿದಂತೆ ಅನೇಕ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಉತ್ತಮ ಅನುದಾನ ನೀಡಿದೆ ಎಂದು ತಿಳಿಸಿದರು.
ಇದಕ್ಕಾಗಿ ಅಭಿನಂದನೆ ಸಲ್ಲಿಸಿ ನಿರ್ಣಯ ಮಂಡಿಸಲಾಗಿದೆ. ಸಂಸದ ಡಿ.ಕೆ.ಸುರೇಶ್ ಅವರು ದೇಶ ಒಡೆಯುವ ಮಾತನಾಡಿದ್ದು, ಅದನ್ನು ಮರೆಸಲು ರಾಜ್ಯ ಸರ್ಕಾರದಿಂದ ನಿರ್ಣಯ ಮಂಡಿಸಲಾಗಿದೆ. ಇಡೀ ದೇಶದಲ್ಲಿ ಖಂಡನೆ ಕೇಳಿಬಂದ ನಂತರ ಈ ನಾಟಕವಾಡಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಎರಡು ಧ್ವಜ ಹಾರಿಸಲು ಕಾಂಗ್ರೆಸ್ ಅನುಮತಿ ನೀಡಿತ್ತು. ದೇಶ ಮೊದಲು ಪಕ್ಷ ನಂತರ ಎಂದು ಬಿಜೆಪಿ ಹೇಳಿದರೆ, ದೇಶ ನಂತರ ಸೋನಿಯಾ ಮೊದಲು ಎನ್ನುವುದು ಕಾಂಗ್ರೆಸ್‌ನ ಧೋರಣೆ. ಕುತಂತ್ರ ಮಾಡಿ ನಿರ್ಣಯ ಕೈಗೊಂಡಿದ್ದು, ಅದನ್ನು ಹಿಂಪಡೆಯಲು ಧರಣಿ ಮಾಡಿದ್ದೇವೆ. ಕೇಂದ್ರ-ರಾಜ್ಯ ಸರ್ಕಾರಗಳು ಜೋಡೆತ್ತಿನಂತೆ ಸಾಗಬೇಕು ಎಂದು ಸಲಹೆ ನೀಡಿದರು
ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದ್ವೇಷ ಕಾರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದುರಂಹಕಾರದಿಂದ ಮಾತನಾಡಿರುವುದು ಜನತೆಗೆ ಮಾಡಿದ ಅಪಮಾನ ಎಂದು ಅಶೋಕ್ ಹೇಳಿದರು.
ಬಿ.ಕೆ.ಹರಿಪ್ರಸಾದ್ ಅವರು ಸಚಿವರಾಗದಿರುವುದರಿಂದ ಈಗ ಸರ್ಕಾರದ ತಪ್ಪುಗಳನ್ನು ಹೇಳುತ್ತಿದ್ದಾರೆ. ಅಯೋಧ್ಯೆಗೆ ಹೋಗುತ್ತಿರುವ ರೈಲಿಗೆ ಮುಸ್ಲಿಮರು ಬೆದರಿಕೆ ಹಾಕುತ್ತಾರೆ ಎಂದರೆ ಅದಕ್ಕೆ ಕಾಂಗ್ರೆಸ್ ಕಾರಣವಾಗುತ್ತದೆ. ಇಲ್ಲಿ ಮುಸ್ಲಿಂ ಸಂಘಟನೆಗಳಿಗೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಈಗಾಗಲೇ ಹೇಳಿದ್ದೆ ಮತ್ತೆ ಪುನರುಚ್ವರಿಸುತ್ತೇನೆ ಎಂದರು.
ತಮಿಳುನಾಡಿನ ಸಚಿವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆತ್ಮೀಯ ಸ್ನೇಹಿತರು. ಅವರ ಪಕ್ಷದವರು ಪಾರ್ಟ್‌ನರ್ ಆಗಿರುವುದರಿಂದ ಅಲ್ಲಿ ಹೋಗಿ ಮಾತನಾಡಲಿ. ನಮ್ಮ ನೀರು ನಮ್ಮ ಹಕ್ಕು ಎನ್ನುವುದು ಬೋಗಸ್ ನಾಟಕ ಎನ್ನುವುದು ಜನರಿಗೆ ಗೊತ್ತಾಗಿದೆ ಎಂದು ಅಶೋಕ್ ತಿಳಿಸಿದರು