Fri. Mar 6th, 2026

ಕ್ಯಾನ್ಸರ್‌ ಚಿಕಿತ್ಸೆಯ ಕಾರ್ ಟಿ- ಸೆಲ್ ಥೆರಪಿ ದೇಶದಲ್ಲಿ ಯಶಸ್ವಿ : ಹೊಸ ಮೈಲಿಗಲ್ಲು ಸಾಧಿಸಿದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ

Share this with Friends

ಬೆಂಗಳೂರು, ಜೂ.18 : ದೇಶದ ಪ್ರತಿಷ್ಠಿತ ಮತ್ತು ಅತ್ಯನ್ನತ ಚಿಕಿತ್ಸಾ ಸೌಲಭ್ಯಗಳನ್ನ ಹೊಂದಿರುವ ಆಸ್ಪತ್ರೆಗಳ ಪೈಕಿ ಮಂಚೂಣಿಯಲ್ಲಿ ಗುರುತಿಸಿಕೊಂಡಿರುವ ನಗರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ಕ್ಯಾನ್ಸರ್‌ ವಿಭಾಗವು ಕ್ಯಾನ್ಸರ್’ನ ಒಂದು ಬಗೆಯ ರಿಲ್ಯಾಪ್ಸ್ಡ್ ಫಾಲಿಕುಲರ್ ಲಿಂಫೋಮಾ ಎಂಬ ಸಮಸ್ಯೆ ಇದ್ದ ಮೂವರು ರೋಗಿಗಳಿಗೆ ಕಾರ್ ಟಿ – ಸೆಲ್ ಥೆರಪಿ ಚಿಕಿತ್ಸೆ ನೀಡಿ ಮೂವರನ್ನು ರೋಗದಿಂದ ಮುಕ್ತಗೊಳಿಸಿ, ಜೊತೆಗೆ ನಿರಂತರ ಮೂರು ವರ್ಷಗಳ ಅವಲೋಕನ ಮಾಡಿ ಈ ಆಸ್ಪತ್ರೆಯು ಕ್ಯಾನ್ಸರ್ ಚಿಕಿತ್ಸೆಯಲ್ಲಿ ನೂತನ ಮೈಲಿಗಲ್ಲು ಸಾಧಿಸಿದೆ.

ಈ ವಿಧದ ಕ್ಯಾನ್ಸರ್ ಗಳು ಭಾರಿ ಅಪಾಯಕಾರಿಯಾಗಿದ್ದು, ಆಸ್ಪತ್ರೆಯು ಈ ಸಮಸ್ಯೆಗೆ ಚಿಕಿತ್ಸೆ ನೀಡಿ ವೈದ್ಯಕೀಯ ವಿಭಾಗದಲ್ಲಿ ಮಹತ್ವದ ಸಾಧನೆ ಮಾಡಿದೆ. ಕೈಮೆರಿಕ್ ಆಂಟಿಜೆನ್ ರಿಸೆಪ್ಟರ್ ಟಿ- ಸೆಲ್ (ಕಾರ್ ಟಿ) ಥೆರಪಿಯು ಒಂದು ಅತ್ಯಾಧುನಿಕ ಇಮ್ಯುನೊಥೆರಪಿಯಾಗಿದ್ದು, ರಿಲ್ಯಾಪ್ಸ್ಡ್ ಅಥವಾ ಚಿಕಿತ್ಸೆಗೆ ಪ್ರತಿರೋಧ ಒಡ್ಡುವ ಲಿಂಫೋಮಾ ಸಮಸ್ಯೆ ಹೊಂದಿರುವ ರೋಗಿಗಳಿಗೆ ಆಶಾಕಿರಣವಾಗಿ ಮೂಡಿಬಂದಿದೆ. ಭಾರತವು ಈಗ ಸ್ಥಳೀಯವಾಗಿ ಕಾರ್ ಟಿ ಥೆರಪಿಯನ್ನು ಉತ್ಪಾದಿಸುತ್ತಿದ್ದು, ಸಿ ಡಿ ಎಸ್ ಸಿ ಓ ಅನುಮೋದಿತ ಎರಡು ಉತ್ಪನ್ನಗಳಾದ ನೆಕ್ಸ್ ಕಾರ್19 ಮತ್ತು ಕ್ವಾರ್ಟೆಮಿಗಳು ಈ ಜೀವರಕ್ಷಕ ಚಿಕಿತ್ಸೆಯನ್ನು ಸುಲಭದಲ್ಲಿ ಲಭ್ಯವಾಗುವಂತೆ ಮಾಡಿವೆ.

ಈ ಸಮಸ್ಯೆ ಎದುರಿಸುತ್ತಿದ್ದ ರೋಗಿಗಳಲ್ಲಿ ಒಬ್ಬರಾದ 66 ವರ್ಷದ ಗೃಹಿಣಿ ಪೆರುಮಲ (ಹೆಸರು ಬದಲಾಯಿಸಲಾಗಿದೆ) ಅವರಿಗೆ 2022 ರಲ್ಲಿ ತೀವ್ರ ರೀತಿಯ ಲಿಂಫೋಮಾ ರಿಲ್ಯಾಪ್ಸ್ ಆಗಿತ್ತು. ಮಾರ್ಚ್ 2023ರಲ್ಲಿ ಅವರಿಗೆ ಕಾರ್ ಟಿ ಥೆರಪಿ ನೀಡಲಾಯಿತು. ಈಗ ಅವರು ಉತ್ತಮ ಜೀವನ ನಡೆಸುತ್ತಿದ್ದು, ತಮ್ಮ ಮೊಮ್ಮಕ್ಕಳೊಂದಿಗೆ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ.

ಮತೊಬ್ಬರು 43 ವರ್ಷದ ರೆಹಾನ್ (ಹೆಸರು ಬದಲಾಯಿಸಲಾಗಿದೆ) ಬೆಂಗಳೂರಿನವರಾಗಿದ್ದು, ಕೋವಿಡ್-19 ಸಂದರ್ಭದಲ್ಲಿ ಅವರಿಗೆ ರೋಗ ಪತ್ತೆಯಾಗಿತ್ತು. ಎಲ್ಲಾ ಸಾಂಪ್ರದಾಯಿಕ ಚಿಕಿತ್ಸೆಗಳು ವಿಫಲವಾದ ನಂತರ ಅವರಿಗೆ 2022ರ ನವೆಂಬರ್ ನಲ್ಲಿ ಕಾರ್ ಟಿ ಥೆರಪಿ ನೀಡಲಾಯಿತು. ಕೋವಿಡ್-19 ಸೋಂಕು ಮತ್ತು ಹಜ್ ಯಾತ್ರೆಯ ಸಮಯದಲ್ಲಿ ಸ್ವೈನ್ ಫ್ಲೂ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುದ ಬಳಿಕವೂ ಅವರು ಈಗ ಆರೋಗ್ಯವಾಗಿದ್ದಾರೆ ಮತ್ತು ಮೂರನೇ ವರ್ಷದ ಫಾಲೋ ಅಪ್‌ ನಲ್ಲಿದ್ದಾರೆ.

ಭಾರತದಲ್ಲಿ ಪ್ರತೀವರ್ಷ 14 ಲಕ್ಷಕ್ಕೂ ಹೆಚ್ಚು ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತವೆ. ಅವುಗಳಲ್ಲಿ ರಕ್ತ ಕ್ಯಾನ್ಸರ್ ಗಳಲ್ಲಿಯೇ ಲಿಂಫೋಮಾ ಸಮಸ್ಯೆಗಳು ಬಹಳ ಸಂಕೀರ್ಣವಾಗಿರುತ್ತವೆ. ಸಾಂಪ್ರದಾಯಿಕ ಚಿಕಿತ್ಸೆಗಳು ಕೆಲವು ರೋಗಿಗಳಿಗೆ ಕೊಂಚ ಮಟ್ಟಿಗೆ ಸಹಾಯ ಮಾಡಿದರೂ ಕ್ಯಾನ್ಸರ್ ಮತ್ತೆ ಮರುಕಳಿಸಿದ ಸಂದರ್ಭದಲ್ಲಿ ಅಥವಾ ಚಿಕಿತ್ಸೆಗೆ ಪ್ರತಿರೋಧ ಎದುರಾದ ಪ್ರಕರಣಗಳಲ್ಲಿ ರೋಗಿಗಳ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಈ ಕ್ಯಾನ್ಸರ್ ಎದುರಿಸಿದ ರೋಗಿಗಳು ಐದು ವರ್ಷಗಳ ಕಾಲ ಬದುಕುಳಿದಿರುವುದು ಕೇವಲ ಶೇ.20-30ಕ್ಕಿಂತಲೂ ಕಡಿಮೆ ಇರಬಹುದು. ಹಾಗಾಗಿಯೇ ಲಿಂಫೋಮಾ ಕ್ಯಾನ್ಸರ್ ಚಿಕಿತ್ಸೆಯ ಯಶಸ್ಸು ಗಮನಾರ್ಹವಾಗಿದೆ.

ಈ ಕುರಿತು ಮಾತನಾಡಿದ ನಾರಾಯಣ ಹೆಲ್ತ್ ಸಿಟಿಯ ಸೀನಿಯರ್ ಕನ್ಸಲ್ಟೆಂಟ್, ಹೆಮಟಾಲಜಿಸ್ಟ್ ಮತ್ತು ಅಡಲ್ಟ್ ಬಿಎಂಟಿ ವಿಭಾಗದ ಮುಖ್ಯಸ್ಥ ಹಾಗೂ ನಾರಾಯಣ ಹೆಲ್ತ್‌ ನ ಆಂಕಾಲಜಿ ಕೊಲೀಜಿಯಂನ ಚೇರ್ ಮನ್ ಡಾ. ಶರತ್ ದಾಮೋದರ್, “ಈ ಪ್ರಕರಣಗಳು ಕಾರ್ ಟಿ ಥೆರಪಿಯ ಅದ್ಭುತ ಸಾಮರ್ಥ್ಯವನ್ನು ತೋರಿಸಿಕೊಟ್ಟಿವೆ. ಈ ಚಿಕಿತ್ಸೆಯನ್ನು ಈಗ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದ್ದು, ವಾಣಿಜ್ಯಿಕವಾಗಿ ಲಭ್ಯವಿದೆ. ಭಾರತೀಯ ರೋಗಿಗಳು ಇನ್ನು ಮುಂದೆ ಅತ್ಯಾಧುನಿಕ ಚಿಕಿತ್ಸೆಗಾಗಿ ವಿದೇಶಗಳಿಗೆ ಹೋಗಬೇಕಾಗಿಲ್ಲ,” ಎಂದು ತಿಳಿಸಿದ್ದಾರೆ.

ಬೆಂಗಳೂರು ನಾರಾಯಣ ಹೆಲ್ತ್‌ ನ ಚೇರ್ ಮನ್ ಮತ್ತು ಸಂಸ್ಥಾಪಕರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು, “ಪ್ರತಿಯೊಬ್ಬ ಭಾರತೀಯನಿಗೂ ಅತ್ಯಾಧುನಿಕ ಚಿಕಿತ್ಸೆ ಲಭ್ಯವಾಗಬೇಕು ಎಂಬುದು ನಮ್ಮ ಉದ್ದೇಶ. ದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆ ಮತ್ತು ಕಾರ್ ಟಿ- ಸೆಲ್ ಥೆರಪಿಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರೋಗಿಗಳಿಗೆ ಹೊಸ ಬದುಕನ್ನು ನೀಡಲು ನಾವು ಬದ್ಧರಾಗಿದ್ದೇವೆ. ವಿಶ್ವದರ್ಜೆಯ ಚಿಕಿತ್ಸೆಯನ್ನು ಸುಲಭವಾಗಿ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿಯಾಗಿ,” ಎಂದು ಹೇಳಿದರು.


Share this with Friends

Related Post