ಬೆಂಗಳೂರು:ಕಬ್ಬು ಬೆಳಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರೊಂದಿಗೆ ಪ್ರತ್ಯೇಕ ಸಭೆ ನಡೆಸುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದ್ದು,ಎರಡೂ ಕಡೆಯ ಅಹವಾಲು ಆಲಿಸಿ ಅಂತಿಮವಾದ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳಗಾರರ ಸಮಸ್ಯೆ ಮತ್ತು ಹೋರಾಟದ ವಿಚಾರದಲ್ಲಿ ಸುದೀರ್ಘ ಚರ್ಚೆ ನಡೆಯಿತು.ಅಂತಿಮವಾಗಿ ಸಿಎಂ ನೇತೃತ್ವದಲ್ಲಿ ಕಾರ್ಖಾನೆ ಮಾಲೀಕರ ಮತ್ತು ಕಬ್ಬು ಬೆಳೆಗಾರರ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎನ್ನುವ ನಿರ್ಣಯಕ್ಕೆ ಸಂಪುಟ ಬಂದಿತು.
ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಎಂ,ನಾಳೆ ಬೆಳಿಗ್ಗೆ 11.00 ಗಂಟೆಗೆ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರುಗಳ ಜೊತೆ ಹಾಗೂ ಮಧ್ಯಾಹ್ನ 1.00 ಗಂಟೆಗೆ ರೈತ ಮುಖಂಡರುಗಳ ಜೊತೆ ಚರ್ಚಿಸಲು ಸಭೆ ಕರೆದಿದ್ದೇವೆ. ಸದರಿ ಸಭೆಯಲ್ಲಿ ಎರಡೂ ಕಡೆಯ ಅಹವಾಲುಗಳನ್ನು ಆಲಿಸಿ ರಾಜ್ಯ ಸರ್ಕಾರವು ತನ್ನ ಮಿತಿಯಲ್ಲಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಿದೆ ಹಾಗಾಗಿ ರಾಜ್ಯದ ಕಬ್ಬು ಬೆಳೆಯುವ ರೈತರು ಸರ್ಕಾರದ ಮೇಲೆ ವಿಶ್ವಾಸವಿಡಬೇಕೆಂದು ಹಾಗೂ ವಿರೋಧ ಪಕ್ಷಗಳ ರಾಜಕಾರಣಕ್ಕೆ ಬಲಿಯಾಗಬಾರದೆಂದು ಮನವಿ ಮಾಡಿದರು.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಕಬ್ಬು ಬೆಳೆಗಾರರ ವಿಚಾರದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಆದ್ದರಿಂದ ತುರ್ತಾಗಿ ಭೇಟಿಗೆ ಅವಕಾಶ ನೀಡಬೇಕೆಂದು ಪತ್ರ ಬರೆಯಲು ಹಾಗೂ ಪ್ರಧಾನಮಂತ್ರಿಗಳ ಕಛೇರಿಯನ್ನು ಸಂಪರ್ಕಿಸಲು ತೀರ್ಮಾನಿಸಲಾಗಿದೆ. ಕೂಡಲೇ ಕೇಂದ್ರ ಸರ್ಕಾರವು ಮಧ್ಯ ಪ್ರವೇಶ ಮಾಡಿ ಮುಖ್ಯವಾಗಿ ರಿಕವರಿ ಪ್ರಮಾಣವನ್ನು ಇಳಿಸುವುದು, ಎಫ್.ಆರ್.ಪಿ. ದರ ಪರಿಷ್ಕರಿಸುವುದು, ಸಕ್ಕರೆ ರಫ್ತು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಒತ್ತಾಯಿಸುವಂತೆ ಚರ್ಚಿಸಲಾಯಿತು ಎಂದರು.
ಕೇಂದ್ರ ಸರ್ಕಾರವು ರಾಜ್ಯದ ವಿಚಾರದಲ್ಲಿ ತೋರುತ್ತಿರುವ ಮಲತಾಯಿ ಧೋರಣೆಯು ರೈತರ ಅನ್ನದ ತಟ್ಟೆಯವರೆಗೂ, ರೈತರ ಭೂಮಿಯವರೆಗೂ ಬಂದಿದೆ. ಈ ವಿಚಾರದಲ್ಲಿ ನಾವು ಅಧಿಕಾರಕ್ಕೆ ಬಂದಾಗಿನಿಂದ ಧ್ವನಿ ಎತ್ತುತ್ತಿದ್ದೇವೆ. ಹಾಗಾಗಿ ನಮ್ಮ ಎಲ್ಲಾ ಪ್ರಯತ್ನಗಳ ಜೊತೆಯಲ್ಲಿ ತಾವೂ ಜೊತೆಗೂಡಬೇಕೆಂದು ಮನವಿ ಮಾಡುತ್ತೇನೆ. ಎಷ್ಟು ಬಿಕ್ಕಟ್ಟುಗಳು ಬಂದರೂ ನಮ್ಮ ಸರ್ಕಾರವು ರೈತ ಪರವಾಗಿದೆ ಎಂದರು.
ಕೆಲವು ರೈತ ಮುಖಂಡರುಗಳು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳ ಕುರಿತು ಪ್ರಸ್ತಾಪಿಸಿರುವುದು ಗಮನಕ್ಕೆ ಬಂದಿದೆ. ನನಗೆ ಮಾಹಿತಿ ಇರುವ ಹಾಗೆ ಮಹಾರಾಷ್ಟ್ರದಲ್ಲಿ ಸುಮಾರು 40ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಲ್ಲಿ 2,515 ರೂ. ರಿಂದ 3,635 ರೂ. ಗಳವರೆಗೆ ಕಬ್ಬಿಗೆ ಬೆಲೆಗಳನ್ನು ನೀಡುತ್ತಿವೆ. ನಾಳೆಯ ಸಭೆಯಲ್ಲಿ ಈ ವಿಚಾರವನ್ನು ಸಹ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

