ಬೆಂಗಳೂರು: ಕಬ್ಬು ಬೆಳೆಗಾರರ ಹೋರಾಟದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಸಭೆ ನಡೆಸಿ ಕೈಗೊಂಡ ನಿರ್ಧಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ವಾಗತ ಮಾಡಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಭೆ ನಡೆಸಿದ್ದಾರೆ ಆದರೆ ನನ್ನ ಪ್ರಕಾರ ಒಂದು ಅಥವಾ 2 ತಿಂಗಳ ಮೊದಲೇ ಈ ಸಭೆ ನಡೆಸಬೇಕಿತ್ತು. ರೈತರು ಬೀದಿಗಿಳಿದು ಹೋರಾಟ ಮಾಡಿ, ಆ ಹೋರಾಟವು ರಾಜ್ಯದ ಇತರ ಜಿಲ್ಲೆಗಳಿಗೆ ಹಬ್ಬುವ ಸಂದರ್ಭದಲ್ಲಿ ನಾವು ಕೂಡ ಹೋರಾಟದ ಸ್ಥಳಕ್ಕೆ ಭೇಟಿ ಕೊಟ್ಟು ಹೋರಾಟಕ್ಕೆ ಬೆಂಬಲ ನೀಡಿದ ನಂತರ ಎಚ್ಚೆತ್ತು ಮುಖ್ಯಮಂತ್ರಿಗಳು ಈ ಸಭೆ ಕರೆದಿದ್ದರು ಮುಖ್ಯಮಂತ್ರಿಗಳು ತುಮಕೂರಿನ ಎಲ್ಲ ಕಾರ್ಯಕ್ರಮಗಳನ್ನೂ ರದ್ದು ಮಾಡಿ ಈ ಸಭೆ ನಡೆಸಿದ್ದು, ಸಭೆಯ ತೀರ್ಮಾನವನ್ನು ಸ್ವಾಗತಿಸುವುದಾಗಿ ತಿಳಿಸಿದರು.
ರಾಜಕೀಯ ಮಾಡಿಲ್ಲ; ಪ್ರಚೋದನೆ ಕೊಟ್ಟಿಲ್ಲ:
ಇವತ್ತಿನ ಸಭೆಯಲ್ಲಿ ಮುಖ್ಯಮಂತ್ರಿಗಳು ಮಾತ್ರವಲ್ಲದೆ ಸಚಿವ ಸಂಪುಟದ ಸದಸ್ಯರು ನನ್ನ ಮೇಲೆ ಹರಿಹಾಯ್ದಿದ್ದಾರೆ. ವಿಜಯೇಂದ್ರ ಅವರು ಯಾಕೆ ಹೋರಾಟಕ್ಕೆ ಹೋಗಬೇಕಿತ್ತು? ರೈತರ ಪ್ರಚೋದನೆ ಮಾಡುವ ಕೆಲಸವನ್ನು ನಾವು ಮಾಡಿದ್ದಾಗಿ ಆರೋಪ ಮಾಡಿದ್ದಾರೆ. ಆದರೆ ಮುಷ್ಕರ ಆರಂಭವಾಗಿ 5 ದಿನ ಕಳೆದರೂ ಉಸ್ತುವಾರಿ ಸಚಿವರು, ಸಕ್ಕರೆ ಖಾತೆ ಸಚಿವರು, ಯಾವ ಸಚಿವರೂ ಹೋರಾಟದ ಕಡೆ ತಿರುಗಿ ನೋಡಲಿಲ್ಲವೋ ಆಗ ನಾವು ಅಲ್ಲಿಗೆ ತೆರಳಿ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ ಸ್ಪಷ್ಟೀಕರಣ ನೀಡಿದರು.
ರಾಜಕೀಯ ಮಾಡುವುದಾಗಲೀ, ರೈತರಿಗೆ ಪ್ರಚೋದನೆ ಮಾಡುವುದಾಗಲೀ ಮಾಡಿಲ್ಲ; ಹೋರಾಟಗಾರರ ಸಭೆಯಲ್ಲಿಯೂ ಅದನ್ನೇ ಹೇಳಿದ್ದೆ. ರೈತ ನಾಯಕ ಯಡಿಯೂರಪ್ಪ ಅವರ ಮಗನಾಗಿ, ರೈತರ ಬಗ್ಗೆ ಕಳಕಳಿಯಿಂದ ಬಂದಿದ್ದಾಗಿ ಹೇಳಿದ್ದೆ. ರಾಜಕೀಯ ಮಾಡಲು ಬಂದಿಲ್ಲ, ಸಕ್ಕರೆ ಕಾರ್ಖಾನೆಗಳ ಮಾಲೀಕರ ಪರವಾಗಿ ಬಂದಿಲ್ಲ ಎಂದಿದ್ದೆ, ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದರು.

