Mon. Dec 23rd, 2024

ಮೋದಿಯವರೊಂದಿಗೆ ದೇಶ ಸೇವೆ ಸಲ್ಲಿಸುವ ಬಯಕೆ : ಭಾಸ್ಕರ್ ರಾವ್

Share this with Friends

ಮೈಸೂರು,ಫೆ. 25: ನರೇಂದ್ರ ಮೋದಿಯವರು ವಿಶ್ವಮಾನ್ಯ ನಾಯಕರಾಗಿದ್ದು,ಅವರೊಂದಿಗೆ ದೇಶ ಸೇವೆ ಮಾಡಬೇಕೆಂಬ ಅದಮ್ಯ ಬಯಕೆ ಇದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ತಿಳಿಸಿದರು.

ಮೈಸೂರಿನ ಆರಾಧ್ಯ ಮಹಾಸಭಾದಲ್ಲಿ ಬ್ರಾಹ್ಮಣ ಸಂಘಟನೆಗಳು ಏರ್ಪಡಿಸಿದ್ದ ಮೈಸೂರು-ಕೊಡಗು ಲೋಕಸಭಾ ಚುನಾವಣೆಯ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೈಸೂರು-ಕೊಡಗು ಲೋಕಸಭೆಯಲ್ಲಿ ಸ್ಪರ್ಧೆ ಮಾಡುವ ಇಚ್ಚೆ ಇದೆ, ಸಮುದಾಯದ ಬೆಂಬಲ ನನಗೆ‌ ಬಹಳ ಮುಖ್ಯ ಎಂದು ಮನವಿ ಮಾಡಿದರು.

ಬ್ರಾಹ್ಮಣ ಸಮುದಾಯ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು, ಬ್ರಾಹ್ಮಣ ಸಮುದಾಯದ ಬಡವರನ್ನು ಉದ್ದಾರ ಮಾಡುವ ಕೆಲಸ ಮಾಡಬೇಕು. ಜೈನ್ ಮತ್ತು ಸಿಖ್ ಧರ್ಮದಲ್ಲಿ ಬಡವರನ್ನು ಮೇಲೆತ್ತಲು ಇಡೀ ಸಮುದಾಯದವರೇ ಟೊಂಕ ಕಟ್ಟಿ ನಿಲ್ಲುತ್ತಾರೆ. ಅಂತಹದ್ದೇ ಮನೋಭಾವ ಬ್ರಾಹ್ಮಣ ಸಮುದಾಯದಲ್ಲೂ ಬರಬೇಕು ಎಂದು ಕರೆ ನೀಡಿದರು.

ಬ್ರಾಹ್ಮಣರಲ್ಲಿ ಸಂಸ್ಕಾರ ಮತ್ತು ಬುದ್ದಿವಂತಿಕೆ ಇದೆ. ಆದರೆ, ಆರ್ಥಿಕವಾಗಿ ದುರ್ಬಲರಾದವರೂ ಇದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಿತಿವಂತ ಬ್ರಾಹ್ಮಣರು ಬಡವರ ಬಗ್ಗೆ ಪ್ರೀತಿ ಮತ್ತು ಕಾಳಜಿ ತೋರಬೇಕು ಎಂದು ಭಸ್ಕರ್ ರಾವ್ ಸಲಹೆ ನೀಡಿದರು.

ನಾನೂ ಸಹ ಮೂಲತಃ ಮೈಸೂರು ಜಿಲ್ಲೆಯವನೇ, ನಂಜನಗೂಡು ತಾಲೂಕಿನ ಕಳಲೆ ನಮ್ಮ ಹುಟ್ಟೂರು. ನಮ್ಮ‌‌‌ ಪೂರ್ವಿಕರೆಲ್ಲರೂ ಮೈಸೂರಿನಲ್ಲೇ ನೆಲಸಿದ್ದರು. ನಮ್ಮ ತಾತ ಮೊದಲ‌ ಮಹಾ ಯುದ್ದದಲ್ಲಿ ಮೈಸೂರ್ ಲ್ಯಾನ್ಸರ್ ಸೇನೆಯಲ್ಲಿ ಅಶ್ವಪಡೆ ಸೈನಿಕರಾಗಿ ಇಸ್ರೇಲ್ ಗೆ ಹೋಗಿ ಹೋರಾಡಿ ಬಂದಿದ್ಧರೆಂದು ಸ್ಮರಿಸಿದರು.

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬ್ರಾಹ್ಮಣರ 2.60 ಲಕ್ಷ ಮತಗಳಿವೆ, ಒಂದು ಬಾರಿಯೂ ಬ್ರಾಹ್ಮಣರಿಗೆ ಲೋಕಸಭೆ ಟಿಕೆಟ್ ನೀಡಿಲ್ಲ. ಈ ಬಾರಿ ಮೈಸೂರಿಗರೇ ಅಗಿರುವ ಭಾಸ್ಕರ್ ರಾವ್ ಅವರಿಗೆ ಟಿಕೆಟ್ ಕೊಡಲಿ ಎಂದು ಸಭೆಯಲ್ಲಿ‌ ಒಕ್ಕೊರಲಿನ ಆಗ್ರಹ ಮಾಡಲಾಯಿತು.

ಇದೇ ವೇಳೆ ವಿಪ್ರ ಸಮುದಾಯದ ಹಲವು ಮಂದಿಯನ್ನು ಸನ್ಮಾನಿಸಲಾಯಿತು.
ನಿಮ್ಮ ಭಾಸ್ಕರ್ ರಾವ್ ಎಂಬ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಕೇಶವಮೂರ್ತಿ, ಬ್ರಾಹ್ಮಣ ಸಭಾದ ಮುಖಂಡರಾದ ಪಾರ್ಥಸಾರಥಿ, ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post