ಬೆಂಗಳೂರು:ಕೋಟಿ ವೃಕ್ಷ ಅಭಿಯಾನದ ಪ್ರತಿಫಲವಾಗಿ ಹಸಿರು ಹೊದಿಕೆ ಶೇ.0.17ರಿಂದ ಶೇ.2.4ಕ್ಕೆ ಏರಿಕೆಯಾಗಿದ್ದು,ಶುದ್ಧ ಗಾಳಿಯ ಗುಣಮಟ್ಟದಲ್ಲಿ ಇಡೀ ದೇಶದಲ್ಲಿ ವಿಜಯಪುರ ಜಿಲ್ಲೆಯು ತೃತೀಯ ಸ್ಥಾನದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ವೃಕ್ಷೋಥಾನ್-2025 ಓಟದ ಪೋಸ್ಟರ್, ಟೀ ಶರ್ಟ್, ಮೆಡಲ್ ಬಿಡುಗಡೆ ಮಾಡಿ ಈ ಉಪಕ್ರಮದ ಮೂಲಕ ಸಾಧಿಸಿರುವ ಸಂಗತಿಗಳ ಬಗ್ಗೆ ಮಾತನಾಡಿದ ಸಚಿವರು,2016ರಲ್ಲಿ ಜಿಲ್ಲೆಯಲ್ಲಿ ಕೇವಲ ಶೇಕಡ 0.17ರಷ್ಟು ಮಾತ್ರ ಅರಣ್ಯವಿತ್ತು. ಆಗ ಜಿಲ್ಲಾಡಳಿತ ಹಾಗೂ ಪಕ್ಷಾತೀತವಾಗಿ ಹಲವು ಸಂಘಸಂಸ್ಥೆಗಳು, ಬಿ.ಎಲ್.ಡಿ.ಇ. ಅಸೋಸಿಯೇಷನ್ ಮೂಲಕ ಕೋಟಿ ವೃಕ್ಷ ಅಭಿಯಾನ ರೂಪಿಸಲಾಯಿತು. ಹೀಗಾಗಿ ಈಗ ಜಿಲ್ಲೆಯಲ್ಲಿ ಹಸಿರು ಹೊದಿಕೆಯು ಶೇಕಡ 2.4ರಷ್ಟಕ್ಕೆ ವೃದ್ಧಿಸಿದೆ. ಜೊತೆಗೆ ಶುದ್ಧ ಗಾಳಿಯ ಗುಣಮಟ್ಟದಲ್ಲಿ ಇಡೀ ದೇಶದಲ್ಲಿ ವಿಜಯಪುರ ಜಿಲ್ಲೆಯು ತೃತೀಯ ಸ್ಥಾನದಲ್ಲಿದೆ. ಅಂರ್ತಜಲ ಮಟ್ಟ ವೃದ್ಧಿಸಿದ್ದು, ಮಣ್ಣಿನ ಸವಕಳಿ ಮತ್ತು ಮರು ಅರಣ್ಯೀಕರಣ ಸಾಧ್ಯವಾಗಿದೆ. ಅಲ್ಲದೆ, ಬಿಸಿಲಿನ ತಾಪಮಾನ ಮೊದಲಿಗಿಂತ 0.5 ಡಿಗ್ರಿ ಸೆಲ್ಸಿಯಷ್ಟು ಕಡಿಮೆಯಾಗಿದ್ದು, ಮಳೆಯ ಪ್ರಮಾಣವು 550 ಮಿ.ಮೀ. ಇದ್ದಿದ್ದು ಈಗ 650 ಮಿ.ಮೀ.ವರೆಗೂ ಹೆಚ್ಚಳ ಕಂಡಿದೆ ಎಂದು ಅವರು ವಿವರಿಸಿದ್ದಾರೆ.
ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ಸಿಎಸ್ಆರ್ ನಿಧಿಯಡಿ ಮೊದಲ ಐದು ವರ್ಷ ತಲಾ 10 ಲಕ್ಷ ಸಸಿಗಳನ್ನು ವಿತರಿಸಲಾಯಿತು. ರೈತರಿಗೆ ತಮಗೆ ಬೇಕಾದ ಗಿಡಗಳನ್ನು ಉಚಿತವಾಗಿ ಹಂಚಲಾಗುತ್ತಿದೆ. ಇದಕ್ಕಾಗಿ 2016ರಲ್ಲಿ ಸರಕಾರದ ವಿಶೇಷ ಅನುದಾನವನ್ನೂ ಪಡೆದುಕೊಳ್ಳಲಾಗಿತ್ತು. ಇಂತಹ ಸೌಲಭ್ಯವನ್ನು ಮುಂದಿನ 5-10 ವರ್ಷಗಳಿಗೆ ವಿಸ್ತರಿಸಿಕೊಂಡು, 5 ಕೋಟಿ ಗಿಡ ನೆಡುವ ಮಹದಾಸೆ ನಮ್ಮದಾಗಿದೆ. ಈಗ ವಾರ್ಷಿಕ ಮಳೆಯ ದಿನಗಳು ಕೂಡ ಮೊದಲಿದ್ದ 20-30 ದಿನಗಳಿಂದ 40 ದಿನಗಳಿಗೆ ಹಿಗ್ಗಿದೆ ಎಂದು ಅವರು ನುಡಿದಿದ್ದಾರೆ.
ಕೋಟಿ ವೃಕ್ಷ ಅಭಿಯಾನದಿಂದ ವಿಜಯಪುರ ಜಿಲ್ಲೆಯಲ್ಲಿ ಜೀವವೈವಿಧ್ಯ ಪೋಷಣೆ ಸಾಧ್ಯವಾಗಿದ್ದು, 180ಕ್ಕೂ ಹೆಚ್ಚು ಬಗೆಯ ಗಿಡಗಳನ್ನು ನೆಡಲಾಗಿದೆ. ಇವುಗಳಿಗೆ ಹನಿ ನೀರಾವರಿ ಮತ್ತು ಸೌರವಿದ್ಯುತ್ ಮೂಲಕ ನೀರು ಪೂರೈಸಲಾಗುತ್ತಿದೆ. ವಿಜಯಪುರಕ್ಕೆ ನೀರು ಒದಗಿಸುವ ಭೂತನಾಳ ಕೆರೆಯ ಸುತ್ತಮುತ್ತ ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಜೊತೆಗೆ ಮಮದಾಪುರ ಕೆರೆಯ ಪ್ರದೇಶದಲ್ಲಿ 1,600 ಎಕರೆಯಲ್ಲಿ 1.27 ಲಕ್ಷ ಗಿಡ ನೆಟ್ಟು ಹಸಿರು ಹೊದಿಕೆಯನ್ನು ಸೃಷ್ಟಿಸಲಾಗಿದೆ. ಇಲ್ಲಿ ಇನ್ನೂ 20 ಸಾವಿರಕ್ಕೂ ಹೆಚ್ಚು ಗಿಡ ನೆಡಲಾಗುವುದು. ಇದು ಉಳಿದ ಜಿಲ್ಲೆಗಳಿಗೆ ಮೇಲ್ಪಂಕ್ತಿಯಾಗುವಂತಿದೆ ಎಂದು ಪಾಟೀಲ ಹೇಳಿದ್ದಾರೆ.
ಕೋಟಿ ವೃಕ್ಷ ಅಭಿಯಾನದ ಮೂಲಕ ಹುಟ್ಟುಹಬ್ಬಕ್ಕೊಂದು ಗಿಡ, ರಕ್ಷಾಬಂಧನದಂದು ವೃಕ್ಷಬಂಧನ, ಏಪ್ರಿಲ್ ಕೂಲ್, ಸಮಾರಂಭಗಳಲ್ಲಿ ಸಸಿಗಳ ಕೊಡುಗೆ ಮುಂತಾದ ಹೆಜ್ಜೆಗಳನ್ನು ಪರಿಚಯಿಸಲಾಗಿದೆ.
ಅಭಿಯಾನದ ಸಂಚಾಲಕರಾದ ಮುರುಗೇಶ್ ಪಟ್ಟಣ ಶೆಟ್ಟಿ, ಪದಾಧಿಕಾರಿಗಳಾದ ವೀರೇಂದ್ರ ಗುಚ್ಚಟ್ಟಿ, ಡಾ. ರಾಜುಯಲಗೊಂಡ, ಸೋಮು ಮಠ ಗುರೂಜಿ, ನಂದೀಶ್ ಹುಂಡೇಕರ್ ಅವರು ಉಪಸ್ಥಿತರಿದ್ದರು.

