ನವದೆಹಲಿ: ಬಿಜೆಪಿ ವಿರುದ್ಧ ವೋಟ್ ಚೋರಿ ಆರೋಪ ಮಾಡಿ ಇಡೀ ದೇಶಾಧ್ಯಂತ ಎಐಸಿಸಿ ಕರೆ ನೀಡಿದ್ದ ಸಹಿ ಸಂಗ್ರಹ ಅಭಿಯಾನ ಕರ್ನಾಟಕದಲ್ಲಿ ಪೂರ್ಣಗೊಂಡಿದ್ದು,ಸಹಿಗಳ ದಾಖಲೆಗಳನ್ನು ಅಧಿಕೃತವಾಗಿ ಎಐಸಿಸಿಗೆ ಹಸ್ತಾಂತರ ಮಾಡಲಾಯಿತು.
ದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ ಡಿಸಿಎಂ ಹಾಗು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಶಿವಕುಮಾರ್ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಮುಖಂಡರ ನಿಯೋಗವು ರಾಜ್ಯದಲ್ಲಿ ಸಂಗ್ರಹಿಸಲಾದ 1,12,41,000 ಸಹಿಗಳ ದಾಖಲೆಗಳನ್ನು ಎಐಸಿಸಿಗೆ ಸಲ್ಲಿಸಿದರು.
ಸಹಿ ಸಂಗ್ರಹ ದಾಖಲೆಗಳ ಒಂದು ಪೆಟ್ಟಿಗೆಯನ್ನು ಸಾಂಕೇತಿಕವಾಗಿ ಸಲ್ಲಿಸಿದರು. ನಂತರ ಉಳಿದ ಪೆಟ್ಟಿಗೆಗಳನ್ನು ಎಐಸಿಸಿ ನೂತನ ಕಟ್ಟಡ ಇಂದಿರಾ ಭವನದಲ್ಲಿ ಎಐಸಿಸಿ ಕಾರ್ಯದರ್ಶಿ ನೆಟ್ಟ ಡಿಸೋಜ ಅವರಿಗೆ ಹಸ್ತಾಂತರಿಸಲಾಯಿತು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ 40 ಜಿಲ್ಲೆಗಳಲ್ಲಿ (ರಾಜಕೀಯ ಉದ್ದೇಶಕ್ಕಾಗಿ ರಚಿಸಿಕೊಂಡಿರುವ ಜಿಲ್ಲೆಗಳು) ಸಹಿ ಸಂಗ್ರಹಿಸಲಾಗಿದೆ. ರಾಜ್ಯದಲ್ಲಿ ನಡೆದ ಅಭಿಯಾನದಲ್ಲಿ ಅತಿ ಹೆಚ್ಚು ಸಹಿ ಸಂಗ್ರಹಿಸಿದ ಜಿಲ್ಲಾಧ್ಯಕ್ಷರುಗಳು ಕೂಡ ಶಿವಕುಮಾರ್ ಅವರ ಜೊತೆಯಲ್ಲಿ ದೆಹಲಿಗೆ ಹೋಗಿ ಸಹಿ ಸಂಗ್ರಹ ದಾಖಲೆಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ ಜಿ ಸಿ ಚಂದ್ರಶೇಖರ್, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಸೊರಕೆ ಮತ್ತಿತರರು ಉಪಸ್ಥಿತರಿದ್ದರು.

