ಕಲಬುರಗಿ: ಫಲಿತಾಂಶದಲ್ಲಿ ಹಿಂದೆ ಉಳಿಯುತ್ತಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ 12 ವಾರಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾರ್ಗದರ್ಶನದಲ್ಲಿ, ಶಾಲಾ ಶಿಕ್ಷಣ ಇಲಾಖೆ, ಅಪರ ಆಯುಕ್ತರ ಕಚೇರಿ ಕಲಬುರಗಿ ವತಿಯಿಂದ ಕಲಬುರಗಿಯಲ್ಲಿ ಒಂದು ದಿನದ ಮಹತ್ವದ ಕಾರ್ಯಾಗಾರವನ್ನು ಆಯೋಜಿಸಲಾಯಿತು.ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಸುಧಾರಿಸಿ ಶೇಕಡಾ 100ರಷ್ಟು ಯಶಸ್ಸು ಸಾಧಿಸುವ ಸರ್ಕಾರದ ಹಾಗೂ ಸಚಿವರ ಬದ್ಧತೆಯನ್ನು ಈ ಕಾರ್ಯಾಗಾರ ಪ್ರತಿಬಿಂಬಿಸುತ್ತದೆ.
ಈ ಕಾರ್ಯಾಗಾರದಲ್ಲಿ ಮೂರು ಜಿಲ್ಲೆಗಳ ಪ್ರತಿಯೊಂದು ತಾಲೂಕಿನ ಆರು ವಿಷಯಗಳ ಆರು ಸಂಪನ್ಮೂಲ ಶಿಕ್ಷಕರು ಭಾಗವಹಿಸಿದ್ದರು. ಇವರೊಂದಿಗೆ ಉಪನಿರ್ದೇಶಕರು, ಡಯಟ್ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಉಪನ್ಯಾಸಕರು, ವಿಷಯ ಪರಿವೀಕ್ಷಕರು ಮತ್ತು ಶಿಕ್ಷಣಾಧಿಕಾರಿಗಳು ಸೇರಿ ಒಟ್ಟು 168 ಜನ ಸಂಪನ್ಮೂಲ ವ್ಯಕ್ತಿಗಳು ಮತ್ತು ಅಧಿಕಾರಿಗಳು ಭಾಗವಹಿಸುವಂತೆ ಕ್ರಮ ಕೈಗೊಳ್ಳಲಾಯಿತು.
ಫಲಿತಾಂಶ ಸುಧಾರಣೆಯ ಮುಖ್ಯ ಗುರಿಯೊಂದಿಗೆ, ಕಾರ್ಯಾಗಾರದಲ್ಲಿ ಹಲವು ಪ್ರಮುಖ ಅಂಶಗಳ ಕುರಿತು ತರಬೇತಿ, ಸಂವಾದ ಮತ್ತು ಚರ್ಚೆ ನಡೆಸಲಾಯಿತು.
1.ಪರೀಕ್ಷಾ ಮಂಡಳಿಯು ಬಿಡುಗಡೆ ಮಾಡಿದ ಮಾದರಿ ಪ್ರಶ್ನೆ ಪತ್ರಿಕೆಗಳ ಪರಿಚಯ.
2.ಪರೀಕ್ಷಾ ಮಂಡಳಿ ಪರಿಚಯ ಮಾಡಿರುವ ನೀಲನಕ್ಷೆ (Blue Print) ಪರಿಚಯ ಮಾಡಿಕೊಡುವುದು ಮತ್ತು ಅದನ್ನು ಅನುಸರಿಸುವುದು.
3.ಪ್ರಶ್ನೆ ಕೋಠಿ (Question Bank) ಪರಿಚಯ ಮತ್ತು ಅನುಸರಿಸುವುದು.
4.ಪಠ್ಯ ಆಧಾರಿತ ಮೌಲ್ಯಮಾಪನ (LBA)ದ ಉಪಯೋಗದ ಅರಿವು.
5.ಲಭ್ಯವಿರುವ ಅವಧಿಯಲ್ಲಿ ವಿದ್ಯಾರ್ಥಿಗಳ ಅಭ್ಯಾಸದ ಹಿಂಬಾಲಿಕೆ (Tracking) ವಿಧಾನಗಳನ್ನು ಅನುಸರಿಸುವುದು.
ಅಪರ ಆಯುಕ್ತರ ಮಾರ್ಗದರ್ಶನದಲ್ಲಿ ಸಂಪನ್ಮೂಲ ಶಿಕ್ಷಕರು ತಯಾರಿಸಿದ ಪಿಪಿಟಿ ಮೂಲಕ ನಾಲ್ಕು ಗಂಟೆಗಳ ಕಾಲ ವಿಷಯ ಸಂಪದೀಕರಣ ಮಾಡಲಾಯಿತು.ಕಾರ್ಯಾಗಾರದಲ್ಲಿ ಹಾಜರಾದ ಸಂಪನ್ಮೂಲ ವ್ಯಕ್ತಿಗಳು, ಅಧಿಕಾರಿಗಳು ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ 12 ವಾರಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದರು. ಇದೇ ವಾರದಲ್ಲಿ ತರಬೇತಿ ಪಡೆದ ಈ ಸಂಪನ್ಮೂಲ ಶಿಕ್ಷಕರು ಮತ್ತು ಅಧಿಕಾರಿಗಳು ಏಕಕಾಲಕ್ಕೆ ಎಲ್ಲಾ ಮೂರು ಜಿಲ್ಲೆಗಳ 16 ತಾಲೂಕುಗಳಲ್ಲಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲ 168 ಸಂಪನ್ಮೂಲ ಶಿಕ್ಷಕರು ಮತ್ತು ಅಧಿಕಾರಿಗಳು ಮುಂಬರುವ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಶತ ಪ್ರತಿಶತ ಸಾಧಿಸುವ ದೃಢ ನಿಶ್ಚಯದೊಂದಿಗೆ ಹೊರಟಿದ್ದು, ಕಾರ್ಯಾಗಾರವು ಸಂಪೂರ್ಣ ಯಶಸ್ವಿ ಕಂಡಿರುವುದಾಗಿ ಇಲಾಖೆ ತಿಳಿಸಿದೆ.ಈ ಕಾರ್ಯವನ್ನು ಮುಂದಿನ ದಿನಗಳಲ್ಲಿ ಬೆಂಗಳೂರು, ಧಾರವಾಡ ಹಾಗೂ ಮೈಸೂರು ವಿಭಾಗಗಳಿಗೆ ವಿಸ್ತರಿಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

