Thu. Mar 5th, 2026

ಸರ್ಕಾರದ ವೈಫಲ್ಯಗಳ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಜೆಡಿಎಸ್ ಹೋರಾಟ : ಪ್ರತಿಪಕ್ಷ ನಾಯಕ ಆರ್.ಅಶೋಕ

Share this with Friends

ಬೆಂಗಳೂರು: ಕುಂದಾನಗರಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ಹಾಗು ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಅಧಿವೇಶನದ ತಯಾರಿ ಬಗ್ಗೆ ನಡೆದ ಸಭೆ ಬಳಿಕ ಮಾತನಾಡಿದ ಅವರು, ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದರಿಂದ ಆ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತದೆ. ಆದರೆ ಸರ್ಕಾರ ಕೇವಲ ಉತ್ತರ ನೀಡಿದರೆ ಸಾಲದು, ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ‌. ಸಮಗ್ರವಾಗಿ ಚರ್ಚೆಯಾಗಿ, ಸಲಹೆ ಸೂಚನೆಗಳು ದೊರೆಯಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳು ದುರಸ್ತಿಯಾಗಿಲ್ಲ. ಶೂ ಸಾಕ್ಸ್ ವಿತರಣೆಯಾಗಿಲ್ಲ. ಈ ಬಗ್ಗೆ ಸ್ಪೀಕರ್ ಗೆ ಪತ್ರ ಬರೆಯಲಿದ್ದೇನೆ. ಈ ಕುರಿತು ಕೂಡ ಸುದೀರ್ಘವಾಗಿ ಚರ್ಚೆಯಾಗಬೇಕಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಯೋತ್ಪಾದಕರಿಗೆ ವಿಶೇಷ ಸವಲತ್ತು, ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ದ್ರವ್ಯಗಳ ಬಳಕೆ, ಬೆಂಗಳೂರಿನಲ್ಲಿ ರಸ್ತೆ ಗುಂಡಿ ಸಮಸ್ಯೆ, ಮಳೆ ಹಾನಿ ಪರಿಹಾರದ ಬಗ್ಗೆ, ಕಾನೂನು ಸುವ್ಯವಸ್ಥೆ ಹಾಳಾಗಿರುವುದರ ಬಗ್ಗೆಸದನದಲ್ಲಿ ಚರ್ಚಿಸಲಿದ್ದೇವೆ ಎಂದರು.

ವಿಧಾನಸಭೆ ಹಾಗು ವಿಧಾನ ಪರಿಷತ್ ಉಭಯ ಸದನಗಳಲ್ಲಿಯೂ ಸರ್ಕಾರದ ವಿರುದ್ಧ ಬಿಜೆಪಿ ಹಾಗು ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸಲಿವೆ.ಜೆಡಿಎಸ್ ಜೊತೆ ಸಮನ್ವಯ ಸಭೆ ನಡೆಸಿ ನಂತರ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.


Share this with Friends

Related Post