ಬೆಂಗಳೂರು: ಜಾಗತಿಕ ಅಂತರಿಕ್ಷ ವಲಯವು ಕಳೆದ ಮೂರು ವರ್ಷಗಳಲ್ಲಿ ಭಾರಿ ಪರಿವರ್ತನೆ ಕಂಡಿದ್ದು, ಹೆಚ್ಚು ಡ್ರೋಣ್ ಕೇಂದ್ರಿತವಾಗಿದೆ ಎಂದು ‘ಅನ್ ಮ್ಯಾನ್ಡ್’ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಶವಂತ ರೆಡ್ಡಿ ಪ್ರತಿಪಾದಿಸಿದರು.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ- 25 ರಲ್ಲಿ ‘ಅಂತರಿಕ್ಷ ತಂತ್ರಜ್ಞಾನದ ಮುಂದಿನ ಸೀಮೆ-ಹೊಸ ಎತ್ತರಗಳು’ ಕುರಿತು ವಲಯದ ಪ್ರಮುಖ ನವೋದ್ಯಮಿಗಳು ನಡೆಸಿದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿನ ಆಧುನಿಕ ಸಂಘರ್ಷಗಳು ಡ್ರೋಣ್ ವಲಯದಲ್ಲಿ ಹೊಸ ಅವಕಾಶಗಳ ಜತೆಗೆ ತುರುಸಿನ ಸ್ಪರ್ಧೆಯನ್ನೂ ಮೂಡಿಸಿವೆ. ಇದು ಭಾರತದ ನವೋದ್ಯಮಿಗಳಿಗೆ ಸವಾಲಿನ ಜತೆಗೆ ಅವಕಾಶಗಳನ್ನೂ ಮುಕ್ತವಾಗಿಸಿದೆ ಎಂದು ವಿವರಿಸಿದರು.
ಜೆಜೆಜಿ ಏರೋ ಸಂಸ್ಥೆಯ ಸಿಇಒ ಅನುಜ್ ಝುಂಝುವಾಲಾ, ಪ್ರಸ್ತುತ ಜಾಗತಿಕ ವೈಮಾನಿಕ ಬಿಡಿಭಾಗಗಳ ಪೂರೈಕೆ ಮಾರುಕಟ್ಟೆಯಲ್ಲಿ ಭಾರತದ ಪಾಲು ಕೇವಲ ಶೇಕಡ 1.5ರಷ್ಟು ಇದ್ದು, ಈ ವಲಯದಲ್ಲಿ ಇನ್ನೂ ಬಹಳಷ್ಟು ಅಭಿವೃದ್ಧಿಯಾಗಬೇಕಾದ ಅವಶ್ಯಕತೆ ಇದೆ ಎಂದರು.
ಏರ್ ಬೌಂಡ್ ಸಂಸ್ಥೆ ಸಂಸ್ಥಾಪಕ ನಮನ್ ಪುಷ್ಪ, ಡ್ರೋಣ್ ಮತ್ತು ವೈಮಾನಿಕ ವಲಯದಲ್ಲಿ ಕಡಿಮೆ ತೂಕದ, ಆದರೆ ಗುಣಮಟ್ಟದ ಹಾಗೂ ದೀರ್ಘ ಕಾಲ ಬಾಳಿಕೆ ಬರುವ ಬಿಡಿಭಾಗಗಳನ್ನು ತಯಾರಿಸುವುದು ಸವಾಲಿನ ಕಾರ್ಯ. ಈ ನಿಟ್ಟಿನಲ್ಲಿ ಭಾರತೀಯ ನವೋದ್ಯಮಗಳು ಗಮನಹರಿಸಬೇಕು ಎಂದು ಹೇಳಿದರು.
ನಿರ್ವಹಣೆ ಮಾಡಿದ ಬ್ಲೂಹಿಲ್ ಡಾಟ್ ವಿಸಿ ಸಂಸ್ಥೆಯ ಸಹ ಸಂಸ್ಥಾಪಕ ಮನು ಅಯ್ಯರ್, ವೈಮಾನಿಕ ಮತ್ತು ಅಂತರಿಕ್ಷ ತಯಾರಿಕಾ ಮಾರುಕಟ್ಟೆಯು ಬಹುತೇಕ ಪಾಶ್ಚಾತ್ಯ ಗ್ರಾಹಕರನ್ನು ಕೇಂದ್ರೀಕರಿಸಿದೆ. ಭವಿಷ್ಯದಲ್ಲಿ ಭಾರತೀಯ ಮಾರುಕಟ್ಟೆ ವಿಸ್ತರಿಸುವತ್ತ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟರು.

