Fri. Mar 6th, 2026

ದಿನಕ್ಕೊಂದು ಪೇಟೆಂಟ್  ಶಿಕ್ಷಣ ಸಂಸ್ಥೆಗಳ ಗುರಿಯಾಗಲಿ:ಮದ್ರಾಸ್ ಐಐಟಿ ಪ್ರೊ.ಗುಮ್ಮಾಡಿ

Share this with Friends

ಬೆಂಗಳೂರು: ಶೈಕ್ಷಣಿಕ ಸಂಸ್ಥೆಗಳು ಸಂಶೋಧನಾ ಕಾಗದ ಪತ್ರ ಮಂಡನೆ ಜತೆಗೆ ನಾವೀನ್ಯತಾ ಪರಿಕಲ್ಪನೆಗಳ ಪೇಟೆಂಟ್ ಪಡೆಯಲು ಯತ್ನಿಸಬೇಕು,ದಿನಕ್ಕೊಂದು ಪೇಟೆಂಟ್ ಶಿಕ್ಷಣ ಸಂಸ್ಥೆಗಳ ಗುರಿಯಾಗಲಿ ಎಂದು ಐಐಟಿ-ಮದ್ರಾಸ್ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಸತ್ಯನಾರಾಯಣ ಗುಮ್ಮಾಡಿ ಕರೆ ನೀಡಿದರು.

ಬೆಂಗಳೂರು ಟೆಕ್ ಶೃಂಗದಲ್ಲಿ ‘ಪರಿಸರೀಯ ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಪರಿಹಾರಗಳು’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಪರಿಹಾರಗಳು ಭವಿಷ್ಯದ ತಂತ್ರಜ್ಞಾನವಾಗಿದ್ದು ಈ ವಲಯದಲ್ಲಿ ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳಲಿವೆ. ವಿದ್ಯಾರ್ಥಿಗಳು ಶೈಕ್ಷಣಿಕ ಪಠ್ಯಕ್ರಮದ ಜತೆಗೆ ನಾವೀನ್ಯತೆ ಹಾಗೂ ಉದ್ಯಮಶೀಲತೆಯ ಮನೋಭಾವ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

20ರಿಂದ 30 ವರ್ಷ ವಯೋಮಾನದ ಯುವಜನರು ನಾವೀನ್ಯತೆಯ ಉದ್ಯಮ ಸಾಹಸಕ್ಕೆ ಮುಂದಾಗಬೇಕು. ಉದ್ಯಮದಲ್ಲಿ ಯಶಸ್ವಿಯಾಗಲು ಪ್ರಸ್ತುತ ಹಲವು ಉತ್ತೇಜನ ಸೌಲಭ್ಯಗಳು ಹಾಗೂ ಅವಕಾಶಗಳು ಲಭ್ಯ ಇವೆ; ಒಂದು ವೇಳೆ ಉದ್ಯಮದಲ್ಲಿ ಯಶಸ್ವಿಯಾಗದಿದ್ದರೂ, ಇದರ ಅನುಭವ ನಿಮ್ಮ ವೃತ್ತಿಜೀವನಕ್ಕೆ ಹೊಸ ಬಲ ನೀಡುತ್ತದೆ ಎಂದರು.

ಶೈಕ್ಷಣಿಕ ಸಂಸ್ಥೆಗಳು ಸಂಶೋಧನಾ ಕಾಗದ ಪತ್ರ ಮಂಡನೆ ಜತೆಗೆ ನಾವೀನ್ಯತಾ ಪರಿಕಲ್ಪನೆಗಳ ಪೇಟೆಂಟ್ ಪಡೆಯಲು ಯತ್ನಿಸಬೇಕು. ಐಐಟಿ ಮದ್ರಾಸ್ ನಲ್ಲಿ ‘ದಿನಕ್ಕೊಂದು ಪೇಟೆಂಟ್’ ಗುರಿ ಹಾಕಿಕೊಳ್ಳಲಾಗಿದ್ದು, ಕಳೆದ ವರ್ಷ 380 ಪೇಟೆಂಟ್ ಪಡೆಯಲಾಗಿದೆ ಎಂದು ಹೇಳಿದರು.

‘ನೊವೊನೆಸಿಸ್’ ಸಂಸ್ಥೆಯ ನಾವೀನ್ಯತಾ ವಿಭಾಗದ ಮುಖ್ಯಸ್ಥ ರಾಜಗೋಪಾಲ್ ಮನೋಹರ್, ಪ್ರಸ್ತುತ ನಾಗರಿಕರಲ್ಲಿ ಆರೋಗ್ಯ ಕಾಳಜಿ ಹಾಗೂ ಪರಿಸರಸ್ನೇಹಿ ಜವಾಬ್ದಾರಿ ಹೆಚ್ಚುತ್ತಿದ್ದು ಈ ನಿಟ್ಟಿನಲ್ಲಿ ಸುಸ್ಥಿರ ತಂತ್ರಜ್ಞಾನಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ತಿಳಿಸಿದರು.

‘ಪ್ರಜ್ ಇಂಡಸ್ಟ್ರೀಸ್’ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಡಾ. ಪಂಕಜ್ ಪಾಟೀಲ್, ದೇಶದಲ್ಲಿ ಜೈವಿಕ ತಂತ್ರಜ್ಞಾನದ ಅತ್ಯುನ್ನತ ಮೂಲಸೌಕರ್ಯ ಹಾಗೂ ಪ್ರತಿಭಾನ್ವಿತ ವೃತ್ತಿಪರರಿದ್ದು, ಜಾಗತಿಕ ಸವಾಲುಗಳು ಪರಿಹಾರ ಒದಗಿಸಿಕೊಡಲು ಭಾರತ ಸಮರ್ಥವಾಗಿದೆ ಎಂದರು.

‘ಸ್ಪ್ರಿಂಗ್ ಬಯೋ’ ಸಂಸ್ಥೆಯ ಸಿಇಒ ಡಾ. ಎಳಿಲ್ ಸುಬ್ಬಿಯನ್ ನಿರ್ವಹಣೆ ಮಾಡಿದರು.


Share this with Friends

Related Post