Fri. Mar 6th, 2026

ಬಿಟಿಎಸ್ ನಲ್ಲಿ ಗಮನ ಸೆಳೆದ ಜೀವಾಮೃತ ಮಿಶ್ರಣಕ್ಕಾಗಿ ಸೋಲಾರ್  ಯಂತ್ರ

Share this with Friends

ಬೆಂಗಳೂರು: ಸ್ಟಾರ್ಟಪ್ ಗಳ ಭರಾಟೆ, ಟೆಕ್ ಸಂತೆಯ ಮಧ್ಯೆ ಆವಿಷ್ಕಾರಿ ರೈತರೊಬ್ಬರು ಗಮನಸೆಳೆಯುವಂತಿದ್ದರು. ಸಾವಯವ ಕೃಷಿಗೆ ಅತ್ಯಗತ್ಯವಾಗಿರುವ ಜೀವಾಮೃತವನ್ನು ಸಮಯಕ್ಕೆ ಸರಿಯಾಗಿ ಮಿಶ್ರಣ ಮಾಡುವ ಸ್ವಯಂಚಾಲಿತ ಸೌರಚಾಲಿತ ಯಂತ್ರವನ್ನು ಅವರು ಅಭಿವೃದ್ಧಪಡಿಸಿದ್ದಾರೆ.

ಜೀವಾಮೃತ ತುಂದಿದ ದೊಡ್ಡ ಡ್ರಮ್ಗೆ 7 ದಿನ ಕೋಲು ಹಾಕಿ ಕಲಕುವುದು ತುಸು ಶ್ರಮದಾಯಕ. ಜತೆಗೆ, 2 ದಿನ ಕಳೆದ ಕೂಡಲೇ ಅದು ವಾಸನೆ ಬರತೊಡಗುತ್ತದೆ. ಹಾಗಾಗಿ ಕೆಲಸದವರೂ ಹಿಂದೇಟು ಹಾಕುತ್ತಾರೆ, ಸಮರ್ಪಕವಾಗಿ ಮಿಶ್ರಗೊಳಿಸದೇ ಇದ್ದರೆ, ಜೀವಾಣುಗಳು ಸಮರ್ಪಕವಾಗಿ ಅಭಿವೃದ್ಧಿಗೊಳ್ಳುವುದಿಲ್ಲ.

ಕಲಬುರಗಿಯ ರೈತ ಶರಣಬಸಪ್ಪ ಪಿ.ಪಾಟೀಲ್ ಅವರು ಇದಕ್ಕೆ ಪರಿಹಾರವಾಗಿ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರವನ್ನು 200-300 ಲೀಟರ್  ಜೀವಾಮೃತ ದ್ರಾವಣ ತುಂಬಿದ ಡ್ರಮ್ಗೆ ಅದ್ದಿ ಇರಿಸಿದರಾಯಿತು. ಟೈಮರ್ ಹೊಂದಿರುವ ಸೌರ ಚಾಲಿತ ಈ ಯಂತ್ರವು ದಿನಕ್ಕೆ 3 ಬಾರಿಯಂತೆ 7 ದಿನ ಸಮಯಕ್ಕೆ ಸರಿಯಾಗಿ ಮಿಶ್ರಗೊಳಿಸುತ್ತದೆ. ಸಮಯ, ಶ್ರಮ ಎರಡೂ ಉಳಿತಾಯವಾಗುತ್ತದೆ. ಪೇಟೆಂಟ್ನೊಂದಿಗೆ ಈ ಯಂತ್ರವನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಬೆಲೆ 7,000 ರೂ. ಇರಲಿದೆ ಎಂದು ಅವರು ವಿವರಿಸುತ್ತಾರೆ.

ಸ್ವತಃ ರೈತರಾಗಿರುವ ಶರಣಬಸಪ್ಪ ಅವರು ಈಗಾಗಲೇ ಕೃಷಿಕರಿಗೆ ಉಪಯುಕ್ತವಾದ ವಿವಿಧ 25 ಸರಳ ಉಪಕರಣಗಳನ್ನು ಅಭಿವೃದ್ಧಿಪಡಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.ಶರಣಬಸಪ್ಪ ಪಿ.ಪಾಟೀಲ್ ಅವರ ಸಂಪರ್ಕ ಸಂಖ್ಯೆ: 9900438541


Share this with Friends

Related Post