Thu. Mar 5th, 2026

ಬಾಹ್ಯಾಂತರಿಕ್ಷ ಕ್ಷೇತ್ರದಲ್ಲಿ ಭಾರತದ ಭವಿಷ್ಯ ಪ್ರಖರವಾಗಿದೆ: ಗಗನಯಾತ್ರಿ ಶುಭಾಂಶು ಶುಕ್ಲಾ

Share this with Friends

ಬೆಂಗಳೂರು: ʼಮುಂಬರುವ ವರ್ಷಗಳಲ್ಲಿ ಭಾರತವು ಬಾಹ್ಯಾಂತರಿಕ್ಷ ಕಾರ್ಯಕ್ರಮಗಳಲ್ಲಿ ಗಮನಾರ್ಹವಾಗಿ ತೊಡಗಿಕೊಳ್ಳಲಿದೆ. ಈ ಕ್ಷೇತ್ರದಲ್ಲಿನ ಭಾರತದ ಭವಿಷ್ಯ ಪ್ರಖರವಾಗಿದೆ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ ತಿಳಿಸಿದ್ದಾರೆ.

ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಮೂರು ದಿನಗಳಿಂದ ನಡೆದ ಬೆಂಗಳೂರು ಟೆಕ್ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ತಮ್ಮ ಗಗನಯಾನದ ವಿಶಿಷ್ಟ ಅನುಭವಗಳನ್ನು ಸಭಿಕರ ಜೊತೆ ಹಂಚಿಕೊಂಡರು. ಗಗನಯಾನ ಹಾಗೂ ಶೂನ್ಯ ಗುರುತ್ವಾಕರ್ಷಣೆ ಸಂದರ್ಭದಲ್ಲಿ ದೇಹದಲ್ಲಿ ಆಗುವ ಬದಲಾವಣೆ,  ಎದುರಾಗುವ ದೈಹಿಕ ಹಾಗೂ ಮಾನಸಿಕ ಸವಾಲುಗಳನ್ನು ವಿವರಿಸಿದರು.

ʼಮುಂಬರುವ ವರ್ಷಗಳಲ್ಲಿ ಭಾರತವು ಬಾಹ್ಯಾಂತರಿಕ್ಷ ಕಾರ್ಯಕ್ರಮಗಳಲ್ಲಿ ಗಮನಾರ್ಹವಾಗಿ ತೊಡಗಿಕೊಳ್ಳಲಿದೆ. ಈ ಕ್ಷೇತ್ರದಲ್ಲಿನ ಭಾರತದ ಭವಿಷ್ಯ ಪ್ರಖರವಾಗಿದೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಗಗನಯಾನ ಕೈಗೊಳ್ಳಿದ್ದಾರೆ. ಈ ಕ್ಷೇತ್ರದಲ್ಲಿನ ನವೋದ್ಯಮಗಳಿಗೆ ಉಜ್ವಲ ಭವಿಷ್ಯ ಇದೆ. ದೇಶದ 300 ನವೋದ್ಯಮಗಳು ಈಗಾಗಲೇ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ವರ್ಷಗಳಲ್ಲಿ ಇಂತಹ ನವೋದ್ಯಮಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಲಿದೆʼ ಎಂದರು.

ಲೇಖಕ ಅಂಕೂರ್ ವಾರಿಕು ಮಾತನಾಡಿ,  ʼನವೋದ್ಯಮಗಳಿಗೆ ವಿಶ್ವಾಸಾರ್ಹತೆಯೇ   ಮುಖ್ಯ .  ಉದ್ಯೋಗಿಗಳು, ಗ್ರಾಹಕರು,  ಸರ್ಕಾರದ ಜೊತೆ ವಿಶ್ವಾಸಾರ್ಹತೆಯಿಂದ ವರ್ತಿಸುವುದನ್ನು  ರೂಢಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಟಾಟಾ ಬ್ರ್ಯಾಂಡ್ನ  ಯಶಸ್ಸಿಗೆ ಅದರ ವಿಶ್ವಾಸಾರ್ಹತೆ ಮಂತ್ರವೇ  ಮುಖ್ಯ ಕಾರಣ.  ಉದ್ಯಮ  ವಹಿವಾಟಿನಲ್ಲಿ ವಿಶ್ವಾಸಾರ್ಹತೆ ರೂಢಿಸಿಕೊಂಡರೆ ಹಣ – ಸಂಪತ್ತು ಯಶಸ್ಸು ತನ್ನಷ್ಟಕ್ಕೆ ತಾವೇ ಹಿಂಬಾಲಿಸಿಕೊಂಡು ಬರುತ್ತವೆʼ ಎಂದು  ವಾರಿಕು ಅವರು ನವೋದ್ಯಮ ಸ್ಥಾಪಕರಿಗೆ ಕಿವಿಮಾತು ಹೇಳಿದರು.

ಜೆಫ್ಟೊ ಸಹ ಸ್ಥಾಪಕ ಕೈವಲ್ಲ ವೋಹ್ರಾ ಅವರ ಜೊತೆಗೆ ವಾಕೂರ್ ಅವರು ನಡೆಸಿಕೊಟ್ಟ ಸಂವಾದದಲ್ಲಿ ಸಂಪತ್ತು ಮತ್ತು ಮೌಲ್ಯ ಸೃಷ್ಟಿಸುವಲ್ಲಿ ಕ್ವಿಕ್ ಕಾಮರ್ಸ್ನ ಜೆಪ್ಟೊ  ಉತ್ತಮ ನಿದರ್ಶನವಾಗಿರುವುದು ಚರ್ಚೆಯ ಕೇಂದ್ರಬಿಂದುವಾಗಿತ್ತು

ʼಭಾರತದ ಮಹಿಳಾ ಕ್ರಿಕೆಟ್ ತಂಡವು ಏಕದಿನ ವಿಶ್ವ ಕಪ್ ಗೆದ್ದ ನಂತರ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ನತ್ತ ಆಕರ್ಷಿತರಾಗುತ್ತಿದ್ದಾರೆ. ಕ್ರೀಡಾಂಗಣಕ್ಕೆ ಮಹಿಳೆಯರು, ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆʼ ಎಂದು ಕ್ರಿಕೆಟ್ ಆಟಗಾರ್ತಿ ರಿಚಾ ಘೋಷ್ ನುಡಿದರು.  ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಮಾತನಾಡಿ, ʼಕ್ರೀಡಾಂಗಣದಲ್ಲಿ ಒತ್ತಡವನ್ನು ಸಮಚಿತ್ತದಿಂದ ಎದುರಿಸಿದರೆ ಸೋಲನ್ನೂ ಗೆಲುವಾಗಿ ಬದಲಾಯಿಸಬಹುದು. ಕ್ರೀಡೆಯಲ್ಲಿನ  ಸೋಲು ಹಲವಾರು ಪಾಠ ಕಲಿಸುತ್ತದೆ. ಯಾವುದೇ ಕ್ಷೇತ್ರದಲ್ಲಿರಲಿ ಸೋಲಿನಿಂದ ಧೃತಿಗೆಡಬಾರದುʼ ಎಂದು ಅಭಿಪ್ರಾಯಪಟ್ಟರು.

ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಡೀಪ್ಟೆಕ್ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದ್ಯಮಗಳಿಗೆ ಇದೇ ಮೊದಲ ಬಾರಿಗೆ ಈ ಗಮನಾರ್ಹ ಮೊತ್ತದ ನೆರವು ನೀಡಲಾಗಿದೆ.ʼಭವಿಷ್ಯದ ಹತ್ತು ವರ್ಷಗಳು ವೈಜ್ಞಾನಿಕ ನಾವೀನ್ಯತೆ ಆಧರಿಸಿದ ತಂತ್ರಜ್ಞಾನಗಳಾದ ಕೃತಕ  ಜಾಣ್ಮೆ, ರೋಬೊಟಿಕ್ಸ್, ಕ್ವಾಂಟಂ ಕಂಪ್ಯೂಟಿಂಗ್ ಮತ್ತು ಜೈವಿಕ ತಂತ್ರಜ್ಞಾನಗಳ ದಶಕವಾಗಿರಲಿದ್ದು, ಬೆಂಗಳೂರಿನ ಟೆಕ್ ಸಮ್ಮೇಳನವು ಅದಕ್ಕೆ ಮುನ್ನುಡಿ ಬರೆದಿದೆʼ ಎಂದು ಅಭಿಪ್ರಾಯಪಟ್ಟರು.

ʼತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಹಾಗೂ  ಮಾರುಕಟ್ಟೆಗಳನ್ನು  ಸೃಷ್ಟಿಸುವಲ್ಲಿ  ಡೀಪ್ಟೆಕ್ ಕ್ಷೇತ್ರಗಳಲ್ಲಿನ ಆವಿಷ್ಕಾರಗಳನ್ನು, ಮಾರುಕಟ್ಟೆ ಅವಕಾಶಗಳ ಮಹತ್ವ ಮನದಟ್ಟು ಮಾಡಿಕೊಡುವಲ್ಲಿ ತಂತ್ರಜ್ಞಾನ ಶೃಂಗಸಭೆಯು  ಗಮನಾರ್ಹ ಯಶಸ್ಸು ಸಾಧಿಸಿದೆ.   ಡೀಪ್ಟೆಕ್ನ ಪ್ರಯೋಜನವು ಬರೀ ಕರ್ನಾಟಕಕ್ಕೆ, ಭಾರತಕ್ಕೆ ಸೀಮಿತವಾಗಿರದೆ ಇಡೀ ವಿಶ್ವಕ್ಕೆ  ದೊರೆಯಲಿದೆ.  ಭವಿಷ್ಯ ರೂಪಿಸುವವರು,  ವೆಂಚರ್ ಕ್ಯಾಪಿಟಲಿಸ್ಟ್ ಹೂಡಿಕೆದಾರರು ಸರ್ಕಾರದ ಜೊತೆ ಕೈಜೋಡಿಸಲು ಮುಂದೆ ಬಂದಿರುವುದು ಸ್ವಾಗತಾರ್ಹವಾಗಿದೆ. ನವೋದ್ಯಮಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಕರ್ನಾಟಕವು ಜಾಗತಿಕ ನವೋದ್ಯಮಗಳಲ್ಲಿ ಮುಂಚೂಣಿ ಐದನೆ ಸ್ಥಾನ ಗಳಿಸುವ ಮಹತ್ವಾಕಾಂಕ್ಷೆ ಸಾಕಾರಗೊಳ್ಳಲು ಭವಿಷ್ಯ ರೂಪಿಸುವವರ ಕೊಡುಗೆ ತುಂಬ ಮಹತ್ವದ್ದಾಗಿದೆʼ ಎಂದರು.

ಅಮೆರಿಕದ ನಾಸಾ -ಏಮ್ಸ್ ಎನ್ಎಸ್ಎಸ್ ನಡೆಸಿದ ಸ್ಪೇಸ್ ಸೆಟಲ್ಮೆಂಟ್ ಡಿಸೈನ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿರುವ ಕಲಬುರಗಿಯ ಎಸ್ಆರ್ಎನ್ ಮೆಹತಾ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿಗಳು ಶುಭಾಂಶು ಶುಕ್ಲಾ ಅವರ  ಜೊತೆ ಸಮೂಹ ಚಿತ್ರ ತೆಗೆದುಕೊಂಡರು.


Share this with Friends

Related Post