ಬೆಂಗಳೂರು: ಸೆಮಿಕಂಡಕ್ಟರ್ ಹಾಗೂ ಪಿಸಿಬಿ ಬೋರ್ಡ್ ಗಳ ವಿನ್ಯಾಸ ಮತ್ತು ಉತ್ಪಾದನೆಗೆ ಜಗತ್ತಿನಲ್ಲೇ ಅತಿ ಹೆಚ್ಚು ಶೇಕಡ 75ರಷ್ಟು ಸಹಾಯಧನವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಪರಿಸ್ಥಿತಿ ಉತ್ತೇಜನಕಾರಿಯಾಗಿದ್ದು ಈ ನಿಟ್ಟಿನಲ್ಲಿ ಜಾಗತಿಕ ಪಾಲುದಾರಿಕೆಗೆ ಉತ್ಸಾಹದಾಯಕ ವಾತಾವರಣವಿದೆ ಎಂದು ಸೆಮಿಕಂಡಕ್ಟರ್ ಪ್ರಾಡಕ್ಟ್ ಗ್ರೂಪ್’ ಸಂಸ್ಥೆಯ ಮುಖ್ಯಸ್ಥ ಡಾ. ಸೂರಜ್ ರಂಗರಾಜನ್ ಹೇಳಿದ್ದಾರೆ.
‘ಬೆಂಗಳೂರು ಟೆಕ್ ಶೃಂಗದ ಕೊನೆಯ ದಿನ ‘ಭವಿಷ್ಯವನ್ನು ರೂಪಿಸುವ ಯಂತ್ರಗಳು: ಪಿಸಿಬಿ ಅಸೆಂಬ್ಲಿ ಉತ್ಕೃಷ್ಟತೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಸೆಮಿಕಂಡಕ್ಟರ್ ಗಳ ತಯಾರಿಕಾ ವಾತಾವರಣ ಆಶಾದಾಯಕವಾಗಿದೆ.ಜಾಗತಿಕ ಸೆಮಿಕಂಡಕ್ಟರ್ ವಲಯದ ಮಾರುಕಟ್ಟೆ ಇನ್ನು ಮೂರು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ಡಾಲರ್ (ಸುಮಾರು ರೂ 88 ಲಕ್ಷ ಕೋಟಿ) ಮೌಲ್ಯಕ್ಕೇರಲಿದ್ದು, ಭಾರತಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದರು.
ಸೆಮಿಕಂಡಕ್ಟರ್ ಗಳ ಗುಣಮಟ್ಟದ ದೃಷ್ಟಿಯಿಂದ ಜಾಗತಿಕ ವಲಯದಲ್ಲಿ ಹಲವು ಮಾನದಂಡಗಳಿವೆ. ಈ ಮಾನದಂಡಗಳ ಎಲ್ಲ ಹಂತಗಳನ್ನು ಪೂರೈಕೆದಾರರು ದಾಟಿ ಬರಬೇಕಿದೆ. ಈ ನಿಟ್ಟಿನಲ್ಲಿ ಜಾಗತಿಕ ಮಾನದಂಡಗಳನ್ನು ಉತ್ಪಾದಕರು ತಲುಪಲು ಅನುಕೂಲಕರ ವಾತಾವರಣ ನಿರ್ಮಾಣವಾಗುವುದು ಅತ್ಯವಶ್ಯ ಎಂದು ಹೇಳಿದರು.
‘ಲ್ಯಾಮ್ ರಿಸರ್ಚ್’ ಸಂಸ್ಥೆಯ ಭಾರತೀಯ ಮುಖ್ಯಸ್ಥ ಅಲೋಕ್ ಜೈನ್, ಭಾರತದಲ್ಲಿ ತಂತ್ರಜ್ಞಾನ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಬೇಡಿಕೆ ಇದೆ. ಮುಂದಿನ ತಲೆಮಾರಿನ ತಂತ್ರಜ್ಞಾನ ಅಭಿವೃದ್ಧಿಯತ್ತ ಹೆಚ್ಚಿನ ಆದ್ಯತೆ ಅಗತ್ಯ ಎಂದರು.
‘ಕ್ಯಾಸ್ಟೆಕ್ ಎಕ್ವಿಪ್ ಮೆಂಟ್’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಜ್ಯೋತಿನಗರ ಮಾತನಾಡಿ, ಶೈಕ್ಷಣಿಕ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಉದ್ದೇಶಗಳು ಭಿನ್ನವಾಗಿರುತ್ತವೆ. ಇವುಗಳನ್ನು ಉದ್ಯಮಕ್ಕೆ ಹೇಗೆ ಅಳವಡಿಸಬೇಕು ಎಂಬುದು ಅತಿ ಮುಖ್ಯ ಎಂದರು.
ಬಾಳೆಹಣ್ಣು ಮಾತ್ರವಲ್ಲ, ಗಿಡದ ಭಾಗಗಳೆಲ್ಲಾ ಕಚ್ಚಾವಸ್ತುವೇ:
ಜೈವಿಕ ಆಧಾರಿತ ಆರ್ಥಿಕತೆ ಭವಿಷ್ಯದ ಆರ್ಥಿಕತೆಯಾಗಿದ್ದು, ವೈವಿಧ್ಯಮಯ ಉತ್ಪನ್ನಗಳಿಗೆ ಅವಕಾಶವಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಮಾತ್ರವಲ್ಲದೆ ತಯಾರಿಕಾ ವಲಯದಲ್ಲಿ ಈ ವಲಯದ ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ ಎಂದು ‘ಬಯೋ ಫೋರ್ಜ್’ ಸಂಸ್ಥೆ ಸಂಸ್ಥಾಪಕ ಕೀರ್ತಿ ಪ್ರಸಾದ್ ವೆಂಕಟ ರಮಣನ್ ಹೇಳಿದ್ದಾರೆ.
‘ಬೆಂಗಳೂರು ಟೆಕ್ ಶೃಂಗ’ದ ಕೊನೆಯ ದಿನ ‘ಕೃತಕ ಬುದ್ಧಿಮತ್ತೆ ಮತ್ತು ಜೀವಶಾಸ್ತ್ರ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳಿಂದೀಚೆಗೆ ಈ ವಲಯದಲ್ಲಿ ಕ್ಷಿಪ್ರ ಪ್ರಗತಿಯಾಗುತ್ತಿದೆ.ಜೈವಿಕ ತಂತ್ರಜ್ಞಾನ ಆಧಾರಿತ ಆರ್ಥಿಕತೆ ವ್ಯಾಪಕವಾಗಿ ಅಭಿವೃದ್ಧಿಯಾಗುತ್ತಿದ್ದು, ಭಾರತೀಯ ನವೋದ್ಯಮಿಗಳಿಗೆ ಈ ವಲಯದಲ್ಲಿ ವಿಪುಲ ಅವಕಾಶಗಳಿವೆ. ಉದಾಹರಣೆಗೆ ಹೇಳುವುದಾದರೆ, ಈ ಹಿಂದೆ ಬಾಳೆ ತೋಟದಲ್ಲಿ ಕೇವಲ ಬಾಳೆಹಣ್ಣು ಮಾತ್ರ ಮಾರಾಟದ ವಸ್ತುವಾಗಿತ್ತು. ಆದರೆ ಈಗ ಬಾಳೆ ಗಿಡದ ಎಲ್ಲ ಭಾಗಗಳೂ ವೈವಿಧ್ಯಮಯ ಉತ್ಪನ್ನಗಳಿಗೆ ಕಚ್ಚಾ ವಸ್ತುವಾಗಿವೆ. ಪರಿಸರಸ್ನೇಹಿ ಕಾಳಜಿ ಮತ್ತು ಅನಿವಾರ್ಯತೆ ಹೆಚ್ಚುತ್ತಿರುವುದರಿಂದ ಜೈವಿಕ ತಂತ್ರಜ್ಞಾನಕ್ಕೆ ಬೇರೆ ಬೇರೆ ಆಯಾಮಗಳಲ್ಲಿ ಅವಕಾಶಗಳಿವೆ ಎಂದರು.
ಐಐಎಸ್ ಸಿ ಜೈವಿಕ-ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ. ನಾಗಸುಮಚಂದ್ರ, ಭವಿಷ್ಯದ ಅಗತ್ಯತೆಗಳ ಅನುಸಾರ ತಂತ್ರಜ್ಞರನ್ನು ಹಾಗೂ ನವೋದ್ಯಮಿಗಳನ್ನು ರೂಪಿಸುವುದು ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಸುಧಾರಣೆಗಳಾಗಬೇಕು ಎಂದರು.
ತಂತ್ರಜ್ಞಾನವು ವಿವಿಧ ಆಯಾಮಗಳಲ್ಲಿ ಬೆಳವಣಿಗೆಯಾಗುತ್ತಿದ್ದು ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಒಂದು ವಿಷಯದಲ್ಲಿ ಪರಿಣತಿ, ತಜ್ಞತೆ ಇದಕ್ಕೆ ಸಾಕಾಗದು. ಶುದ್ಧ ವಿಜ್ಞಾನವೂ ಸೇರಿದಂತೆ ಬಹುಶಿಸ್ತೀಯ ಪರಿಣತಿ ಇಂದಿನ ತುರ್ತು ಎಂದರು.
ಏಟ್ರಿಯಾ ವಿಶ್ವವಿದ್ಯಾಲಯದ ಡೀನ್ ಡಾ. ಪ್ರಫುಲ್ ಚಂದ್ರ, ಎಐ ಸೇರಿದಂತೆ ಯಾವುದೇ ಆಧುನಿಕ ತಂತ್ರಜ್ಞಾನದಲ್ಲಿ ಪ್ರಗತಿ ಹೊಂದಲು ಶುದ್ಧ ವಿಜ್ಞಾನದ ಪ್ರಾಥಮಿಕ ಅಡಿಪಾಯ ಅತಿ ಅವಶ್ಯ ಎಂದು ಹೇಳಿದರು.

