ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 2.5 ವರ್ಷ ಪೂರ್ಣಗೊಂಡಿದ್ದು, ಉಳಿದ ಅವಧಿಗೆ ಎರಡನೇ ಇನ್ನಿಂಗ್ಸ್ ಇರುವುದಿಲ್ಲ ನಮ್ಮದು ಒಂದೇ ಇನ್ನಿಂಗ್ಸ್,ನುಡಿದಂತೆ ನಡೆಯುವ ಸರ್ಕಾರ,ನೀಡಿದ ಭರವಸೆಗಳ ಈಡೇರಿಗೆ ಮಾತ್ರ ಆಧ್ಯತೆ ನೀಡಲಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಬಣಗಳಿಲ್ಲ, ಬಣ ರಾಜಕೀಯವೂ ಇಲ್ಲ, ಬಿಜೆಪಿಯ ಆರೋಪ ನಿರಾಧಾರ ಬಣಗಳು ಇರುವುದು ಬಿಜೆಪಿಯಲ್ಲಿಯೇ ಅವರಲ್ಲಿ ನಾಲ್ಕೈದು ಬಣಗಳಿವೆ ನಮ್ಮಲ್ಲಿ ಒಂದೇ ಬಣ ಅದು ಕಾಂಗ್ರೆಸ್ ಬಣ, ಅಲ್ಲದೆ ನಮ್ಮಲ್ಲಿ ನಾಯಕತ್ವಕ್ಕೆ ಯಾವ ಕೊರತೆಯೂ ಇಲ್ಲ, ಹತ್ತು ಮಂದಿ ಮುಖ್ಯಮಂತ್ರಿಯಾಗುವ ಸಾಮರ್ಥ್ಯ ಇರುವ ನಾಯಕರಿದ್ದಾರೆ ಬಿಜೆಪಿಯಲ್ಲಿ ಯಾರಿದ್ದಾರೆ? ಅವರಲ್ಲಿ ನಾಯಕತ್ವವೇ ಇಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಾಯಕತ್ವವನ್ನು ಅವರ ಪಕ್ಷದ ರಾಜ್ಯ ನಾಯಕರೇ ಒಪ್ಪಿಲ್ಲ,ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ ಬಲಿಷ್ಠವಾಗಿತ್ತು ಈಗ ಬಿಜೆಪಿ ಜತೆ ಸೇರಿಕೊಂಡು ಅದನ್ನೂ ಕಳೆದುಕೊಂಡಿದೆ. ಹಾಗಾಗಿ ನಾಯಕತ್ವ ಇರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದು ಸಮರ್ಥಿಸಿಕೊಂಡರು.
ಮಾಜಿ ಸಚಿವ ರಾಜಣ್ಣ ನವೆಂಬರ್ ಕ್ರಾಂತಿ ಬಗ್ಗೆ ಮಾತನಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ,ಯಾವುದೇ ಕ್ರಾಂತಿಯೂ ಇಲ್ಲ,ವಾಂತಿಯೂ ಇಲ್ಲ ಎಲ್ಲವೂ ಶಾಂತವಾಗಿದೆ ಎಂದರು.
ನಾನು ಯಾರ ಬಳಿಯೂ ರಾಜಕೀಯ ಮಾತನಾಡಲ್ಲ, ಸರ್ಕಾರ ೨.೫ ಪೂರೈಸಿದೆ, ಎರಡನೇ ಇನ್ನಿಂಗ್ ಎಂದೇನಿಲ್ಲ. ಐದು ವರ್ಷ ಒಂದೇ ಇನ್ನಿಂಗ್ಸ್ ಇರತ್ತದೆ, ಎಲ್ಲಾ ಪಕ್ಷ ಚುನಾವಣೆ ವೇಳೆ ಪ್ರಣಾಳಿಕೆ ಪ್ರಕಟಿಸಲಿವೆ, ಅದರಂತೆ ನಾವು ಪ್ರಕಟಿಸಿದ್ದು ನೀಡಿದ್ದ ಭರವಸೆ ಈಡೇರಿಸಲಿದ್ದೇವೆ. ನುಡಿದಂತೆ ನಡೆಯುವ ಪಕ್ಷ ಮತ್ತು ಸರ್ಕಾರ ನಮ್ಮದು, ಹಿಂದೆ ೧೫೮ ಭರವಸೆ ಈಡೇರಿಸಿದ್ದೇವು, ಬಿಜೆಪಿ ೬೦೦ ಭರವಸೆ ನೀಡಿ ಈಡೇರಿಸಿದ್ದು ೬೦ ಮಾತ್ರ. ಬರೀ ಸುಳ್ಳು ಹೇಳುತ್ತಾರೆ ಆದರೆ ನಾವು ಕೆಲಸ ಮಾಡಲಿದ್ದೇವೆ ಎಂದರು.
ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರಾ ಎಂದರೆ ಅದರ ಬಗ್ಗೆ ಮಾತನಾಡಲ್ಲ ಎಂದು ಪ್ರತಿಕ್ರಿಯೆಗೆ ಸಚಿವರು ನಿರಾಕರಿಸಿದರು.

