Fri. Mar 6th, 2026

ಪೌರಕಾರ್ಮಿಕರ ವೇತನ ನೀಡುವಲ್ಲಿ ವಿಳಂಬ ಮಾಡಿದರೆ ಕ್ರಮ: ಪಿ ರಘು ಸೂಚನೆ

Share this with Friends

ಬೆಂಗಳೂರು ನಗರ ಜಿಲ್ಲೆ: ಪೌರಕಾರ್ಮಿಕರು, ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಚಾಲಕರು, ಸಹಾಯಕರಿಗೆ ಸಕಾಲದಲ್ಲಿ ವೇತನ ನೀಡದೆ ತೊಂದರೆ ನೀಡಿದಲ್ಲಿ ಸಹಿಸುವುದಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ವಹಿಸಬೇಕು ಎಂದು  ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಪಿ.ರಘು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರು ಮತ್ತು ಲೋಡರ್ಸ್, ಕ್ಲೀನರ್ಸ್ ಮತ್ತು ಡ್ರೈವರ್ಸ್ ಕಾರ್ಮಿಕರೊಂದಿಗೆ ಇಂದು ಗೋವಿಂದರಾಜನಗರದಲ್ಲಿರುವ ಜ್ಞಾನಸೌಧ ಸಭಾಂಗಣದಲ್ಲಿ ನಡೆದ ನೇರ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ನೀಡುವಲ್ಲಿ ಹಲವಾರು ತಾಂತ್ರಿಕ ತಪ್ಪುಗಳು, ಜನ್ಮದಿನಾಂಕ, ಜನ್ಮಸ್ಥಳ ತಪ್ಪು ನಮೂದು ಮತ್ತು ಸಿಂಧುತ್ವ ಇರದೇ ವಿಳಂಬವಾಗುತ್ತಿದೆ ಎಂದು ಪೌರಕಾರ್ಮಿಕರಾದ ಅಂಜಿನಮ್ಮ ಕೇಳಿದರು.

ಇದಕ್ಕೆ ಪಾಲಿಕೆ ವತಿಯಿಂದ ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ವಿಶೇಷ ಶಿಬಿರ ಆಯೋಜಿಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಹಾಗೂ ಜನ್ಮದಿನಾಂಕದ ತಪ್ಪುಗಳನ್ನು ಸರಿಪಡಿಸಲಾಗುವುದು ಎಂದು ಪಾಲಿಕೆಯ ಆಯುಕ್ತರಾದ ಕೆ ವಿ ರಾಜೇಂದ್ರ ಅವರು ಭರವಸೆ ನೀಡಿದರು.

ಪೌರಕಾರ್ಮಿಕರಿಂದ ನಿಯಮಬಾಹಿರವಾಗಿ ಕಸ ವಿಂಗಡಣೆ ಮಾಡಿಸುವ ಕೆಲಸ ಮಾಡಿಸಲಾಗುತ್ತಿದೆ. ನಿರಾಕರಿಸಿದರೆ ಕಾಲದಿಂದ ಹೊರಹಾಕಲಾಗುವುದು ಎಂದು ಬೆದರಿಕೆ ಒಡ್ಡಲಾಗುತ್ತಿದೆ ಎಂದು ಆಯೋಗದ ಗಮನಕ್ಕೆ ತರಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು ಮೇಲ್ವಿಚಾರಕರಿಗೆ ಎಚ್ಚರಿಕೆ ನೀಡಿದರು.

ಅಂತಿಮವಾಗಿ ಮಾತನಾಡಿದ ಆಯೋಗದ ಅಧ್ಯಕ್ಷರು,‌ನಗರದ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರಿಗೆ ಸಾರ್ವಜನಿಕರಿಂದ ದೈಹಿಕ ಹಲ್ಲೆ ಹಾಗೂ ಬೈಗುಳ ಅನುಭವಿಸುವ ಕೆಲವು ಪ್ರಕರಣಗಳು ಕಂಡುಬಂದಿದ್ದು ಅವುಗಳ ಬಗ್ಗೆ ಹಿರಿಯ ಅಧಿಕಾರಿಗಳು ಸಕಾಲದಲ್ಲಿ ನೆರವಾಗಬೇಕು ಪೌರಕಾರ್ಮಿಕರ ರಕ್ಷಣೆಗೆ ಸೂಕ್ತ ಗಮನ ಹರಿಸಬೇಕು,ಯಾವ ಕಾರಣಕ್ಕೂ ಪೌರಕಾರ್ಮಿಕರು, ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಚಾಲಕರು, ಸಹಾಯಕರಿಗೆ ವೇತನ ತಡವಾಗಬಾರದು, ಸಕಾಲದಲ್ಲಿ ವೇತನ ನೀಡದೆ ತೊಂದರೆ ನೀಡಿದಲ್ಲಿ ಸಹಿಸುವುದಿಲ್ಲ. ಸೂಕ್ತ ಕ್ರಮ ಖಚಿತ ಎಂದರು.

ಸಂವಾದ ಕಾರ್ಯಕ್ರಮದಲ್ಲಿ ಪಶ್ಚಿಮ ನಗರ ಪಾಲಿಕೆಯ ಅಪರ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ, ಆಯೋಗದ ಕಾರ್ಯದರ್ಶಿಗಳಾದ ಸುಮಯ್ಯಾ ಸೇರಿದಂತೆ ಪೌರಕಾರ್ಮಿಕರು, ಲೋಡರ್ಸ್,  ಕ್ಲೀನರ್ಸ್, ಚಾಲಕರು ಹಾಗೂ ಕಾರ್ಮಿಕರು ಹಾಗೂ ಪಾಲಿಕೆ ಅಧಿಕಾರಿಗಳು ಪಾಲ್ಗೊಂಡಿದ್ದರು.


Share this with Friends

Related Post