Fri. Mar 6th, 2026

ಸರ್ಕಾರದ ಪರ ವಕೀಲರ ವಾದ ದಾಖಲಾತಿಗೆ ಪ್ರತ್ಯೇಕ ಘಟಕ ಸ್ಥಾಪನೆ: ಡಿಕೆ ಶಿವಕುಮಾರ್

Share this with Friends

ಬೆಂಗಳೂರು:ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ನಮ್ಮ ಪರ ವಕೀಲರು ಮಂಡಿಸುವ ವಾದವನ್ನು ದಾಖಲಾತಿ ಮಾಡಲು ಘಟಕ ಆರಂಭಿಸಲು ತೀರ್ಮಾನಿಸಿದ್ದೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದರು.

ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಜಲ ಸಂಪನ್ಮೂಲ, ಬಿಡಿಎ ಭೂಸ್ವಾಧೀನ ಪ್ರಕರಣಗಳ ಕುರಿತು ಬೆಂಗಳೂರು ನಗರಾಭಿವೃದ್ಧಿ ಹಾಗೂ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,“ವಿಳಂಬ ಪ್ರಕ್ರಿಯೆ ತಡೆಯಲು ಸುಪ್ರೀಂ ಕೋರ್ಟಿನ ವಕೀಲರ ಸಲಹೆ ಪಡೆದು ಮುಂದಿನ ಅಧಿವೇಶನದಲ್ಲಿ ಕಾನೂನಿಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ. ದೆಹಲಿಯಲ್ಲಿ ಹಾಗೂ ಬೆಂಗಳೂರಿನಲ್ಲಿ ಇಂತಹ ಕಾನೂನು ಪ್ರಕರಣಗಳ ಪರಿಶೀಲನೆಗೆ ಕಾನೂನು ಘಟಕ ಸ್ಥಾಪಿಸಲು ತೀರ್ಮಾನಿಸಿದ್ದೇವೆ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ನಮ್ಮ ಪರ ವಕೀಲರು ಮಂಡಿಸುವ ವಾದವನ್ನು ದಾಖಲಾತಿ ಮಾಡಲು ಘಟಕ ಆರಂಭಿಸಲು ತೀರ್ಮಾನಿಸಿದ್ದೇವೆ” ಎಂದು ಮಾಹಿತಿ ನೀಡಿದರು.

“ಬಿಡಿಎ, ಜಿಬಿಎ ವ್ಯಾಪ್ತಿಯಲ್ಲೂ ಈ ರೀತಿ ವಾದ ದಾಖಲೆಗಳನ್ನು ಮಾಡಲಾಗುವುದು. ಕಾನೂನು ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುವುದು. ಪ್ರಾಧಿಕಾರ ರಚಿಸಲಾಗುವುದು. ಇನ್ನು ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆ 1 ಹಾಗೂ 2 ರಸ್ತೆಯ ಭೂಸ್ವಾಧೀನಕ್ಕೆ ಪರಿಹಾರ ನೀಡಲು ಐದು ಅವಕಾಶ ನೀಡಲಾಗಿದೆ. ಈ ಯೋಜನೆ ವಿಚಾರದಲ್ಲಿ ನಾವು ಹಿಂದೆ ಸರಿಯುವುದಿಲ್ಲ. ಆರು ತಿಂಗಳಲ್ಲಿ ನಾವು ಕೆಲಸ ಪ್ರಾರಂಭಿಸಬೇಕು. ಒಂದು ತಿಂಗಳ ಒಳಗಾಗಿ ಪರಿಹಾರ ವಿತರಣೆ ಆರಂಭಿಸಬೇಕು, ವಿಳಂಬ ಮಾಡಿದರೆ ಹಳೇ ಅಧಿಕಾರಿಗಳನ್ನು ತೆಗೆದುಹಾಕಿ ಹೊಸ ಅಧಿಕಾರಿಗಳ ನಿಯೋಜಿಸಿ ಕೆಲಸ ಮುಂದುವರಿಸುತ್ತೇವೆ” ಎಂದು ತಿಳಿಸಿದರು.

“ಕೆಲವು ಸಂದರ್ಭದಲ್ಲಿ ಕಂದಾಯ ಇಲಾಖೆ ಭೂಸ್ವಾಧೀನ ಪ್ರಕ್ರಿಯೆ ಮಾಡಿದರೂ ಪರಿಹಾರ ಹಣ ನೀಡಬೇಕಾಗಿರುವುದು ನೀರಾವರಿ ಇಲಾಖೆಯ ವಿವಿಧ ನಿಗಮಗಳಾಗಿರುತ್ತವೆ. ಇಂತಹ ಪ್ರಕರಣಗಳಲ್ಲಿ ಈ ನಿಗಮಗಳನ್ನೇ ಪಾರ್ಟಿಯನ್ನಾಗಿ ಮಾಡದೇ ಪ್ರಕರಣ ನಡೆಸಲಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇವೆ. ಸುಪ್ರೀಂ ಕೋರ್ಟ್ ನಲ್ಲಿ ಎಸ್ಎಲ್ ಪಿ ಅರ್ಜಿ ಹಾಕುತ್ತಿದ್ದು, ಕೆಲವು ಪ್ರಕರಣವನ್ನು ವಾಪಸ್ ತರಲು ಮುಂದಾಗಿದ್ದೇವೆ. ನೀರಾವರಿ ಇಲಾಖೆಯಲ್ಲಿ 9 ಲಕ್ಷ ರೂಪಾಯಿ ಪರಿಹಾರ ನಿಧಿ ಘೋಷಿಸಿದ್ದರೆ, ನ್ಯಾಯಾಲಯದಲ್ಲಿ ಅರ್ಜಿ ಹಾಕಿ 9, 10, 15, 20 ಕೋಟಿ ರೂಪಾಯಿ ಪರಿಹಾರ ನೀಡಲು ಆದೇಶ ನೀಡಲಾಗಿದೆ. ಹೀಗಾಗಿ ನಮ್ಮ ಸರ್ಕಾರ ಈ ತೀರ್ಮಾನಕ್ಕೆ ಬರಲಾಗಿದೆ” ಎಂದರು.

ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ಒಪ್ಪಿತ ಭೂಸ್ವಾಧೀನಕ್ಕೆ ಪರಿಹಾರದ ಮೊತ್ತ ಹೆಚ್ಚಿಸುವ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದೇವೆ. ಇದಕ್ಕೆ ಸುಮಾರು 75 ಸಾವಿರ ಕೋಟಿ ರೂ. ಮೀಸಲಿರಿಸಲಾಗುವುದು. ವಿವಿಧ ನೀರಾವರಿ ನಿಗಮಗಳ ವ್ಯಾಪ್ತಿಯಲ್ಲಿ 61, 843 ಪ್ರಕರಣಗಳಿವೆ. ಕೆಎನ್ಎನ್ಎಲ್ ನಲ್ಲಿ 25,356, ವಿಜೆಎನ್ಎಲ್ ನಲ್ಲಿ 2,856, ಸಿಎನ್ಎನ್ಎಲ್ ನಲ್ಲಿ 4455, ಯುಕೆಪಿ, ಆರ್ ಅಂಡ್ ಆರ್ ಹಾಗೂ ಕೆಬಿಜೆಎನ್ಎಲ್ ನಲ್ಲಿ 29,176 ಪ್ರಕರಣಗಳು ಬಾಕಿ ಉಳಿದಿವೆ. “ಕಂದಾಯ ಇಲಾಖೆಯವರು ಬೆಂಗಳೂರು ವ್ಯಾಪ್ತಿಯಲ್ಲಿ ತನಿಖೆ ಮಾಡಲು ಆದೇಶ ಮಾಡಿದ್ದು, ಅಧಿಕಾರಿಗಳು, ಕಾನೂನು ತಂಡದವರು ಸೇರಿ ಸರಿಯಾದ ಸಮಯದಲ್ಲಿ ಅರ್ಜಿ ಹಾಕದೇ ಕಾಲಹರಣ ಮಾಡಿರುವುದು ಕಂಡುಬಂದಿದೆ. ಈ ವಿಚಾರವಾಗಿ ವರದಿ ಸಲ್ಲಿಸುವಂತೆ ಸೂಚಿಸಿದ್ದೇವೆ. ಕೆಲವು ಪ್ರಮುಖ ಪ್ರಕರಣಗಳು ನ.10ರಂದು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯಲಿದ್ದು, ಅಷ್ಟರೊಳಗೆ ನಮ್ಮಲ್ಲಿ ಆಗಿರುವ ನ್ಯೂನ್ಯತೆ ಗಮನಕ್ಕೆ ತರಬೇಕಾಗಿದೆ. ಇದರ ಜೊತೆಗೆ ಎಸ್ಐಟಿ ರಚಿಸಿ ಎಲ್ಲೆಲ್ಲಿ ಯಾವ ರೀತಿ ಪಿತೂರಿ ನಡೆದಿದೆ ಎಂದು ವಿಚಾರಣೆ ನಡೆಸಲಾಗುವುದು. ಕರ್ತವ್ಯ ಲೋಪ ಮಾಡಿರುವ ಅಧಿಕಾರಿಗಳ ವಿರುದ್ಧ ಇಲಾಖೆವಾರು ತನಿಖೆಗೆ ಆದೇಶಿಸಿ ಎಲ್ಲರನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ. ಇನ್ನು ವಕೀಲರುಗಳ ಪೈಕಿ ಯಾರು ಸಮಯಕ್ಕೆ ಸರಿಯಾಗಿ ನ್ಯಾಯಾಲಯದಲ್ಲಿ ಅರ್ಜಿಯನ್ನು ಕಾನೂನುಬದ್ಧವಾಗಿ ಸಲ್ಲಿಸದೇ ಕರ್ತವ್ಯ ಲೋಪ ಎಸಗಿದ್ದಾರೆ ಅವರನ್ನು ವಜಾಗೊಳಿಸಲು ತೀರ್ಮಾನಿಸಲಾಗಿದೆ. ಅಧಿಕಾರಿಗಳು, ವಕೀಲರು ಎಲ್ಲರನ್ನು ಹೊಣೆಗಾರರನ್ನಾಗಿ ಮಾಡಲು ನಿರ್ಧರಿಸಿದ್ದೇವೆ. ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ” ಎಂದರು.

“ನೀರಾವರಿ ಇಲಾಖೆ ಪ್ರಕರಣಗಳ ವಾದ ಮಂಡಿಸಲು 219 ವಕೀಲರಿದ್ದಾರೆ. ಇವುಗಳಲ್ಲಿ ಯಾರು ಹೊಣೆಗಾರರಿಲ್ಲ, ಅವರೆಲ್ಲರನ್ನು ಕಿತ್ತೊಗೆದು ಬೇರೆ ವಕೀಲರನ್ನು ನೇಮಿಸಲಾಗುವುದು. ನಮ್ಮ ಇಲಾಖೆಯ ಗೌರವ ಉಳಿಸಲು ರಾಜ್ಯದಲ್ಲೇ ಐತಿಹಾಸಿಕ ತೀರ್ಮಾನಕ್ಕೆ ಬರಲಾಗಿದೆ” ಎಂದು ತಿಳಿಸಿದರು.

ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥಕ್ಕೆ ಪ್ರಾಧಿಕಾರ ರಚನೆ:

“ನೂತನ ಕಾಯ್ದೆ ಪ್ರಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಾಧಿಕಾರ ರಚನೆಗೆ ಅವಕಾಶವಿದೆ. ಆಮೂಲಕ ನ್ಯಾಯಾಲಯದ ಮೆಟ್ಟಿಲೇರದೆ ಇಲ್ಲೇ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲಾಗುವುದು. ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಹಾಗೂ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಈ ಪ್ರಾಧಿಕಾರವನ್ನು ಯಾವ ರೀತಿ ರಚಿಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ನಮ್ಮ ಸರ್ಕಾರ ಈ ಪ್ರಾಧಿಕಾರ ರಚಿಸಲಿದೆ” ಎಂದು ತಿಳಿಸಿದರು.


Share this with Friends

Related Post