ಚಿಕ್ಕಬಳ್ಳಾಪುರ: ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಬದಲಾಗಬೇಕು ಎಂದರೆ ಬದಲಾಗುತ್ತದೆ ನನ್ನನ್ನೇ ಮುಂದುವರೆಸಬೇಕು ಎಂದು ಬಯಸಿದರೆ ನಾನೇ ಮುಂದುವರೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮ್ಮಲ್ಲಿ ಹೈಕಮಾಂಡ್ ಇದೆ, ಏನೇ ನಿರ್ಧಾರ ಆಗುವುದಿದ್ದರೂ ಹೈಕಮಾಂಡ್ ಮಟ್ಟದಲ್ಲಿಯೇ ಆಗಲಿದೆ. ನಮ್ಮ ಹೈಕಮಾಂಡ್ ಹೇಳಿದಂತೆ ನಾವು ಕೇಳುತ್ತೇವೆ, ಮುಖ್ಯಮಂತ್ರಿಯಾಗಿ ನನ್ನನ್ನೇ ಮುಂದುವರಿಸಿ ಎಂದರೆ ನಾನು ಅಧಿಕಾರದಲ್ಲಿ ಮುಂದುವರೆಯುತ್ತೇನೆ, ಹೈಕಮಾಂಡ್ ಏನು ತೀರ್ಮಾನ ಮಾಡಲಿದಿಯೋ ಅದನ್ನ ನಾನೂ ಒಪ್ಪಿಕೊಳ್ಳಬೇಕು,ಡಿಕೆ ಶಿವಕುಮಾರ್ ಕೂಡ ಒಪ್ಪಿಕೊಳ್ಳಬೇಕು ಎಂದರು.
ನಾಲ್ಕೈದು ತಿಂಗಳ ಹಿಂದೆ ಸಂಪುಟ ಪುನಾರಚನೆ ವಿಚಾರಕ್ಕೆ ದೆಹಲಿಗೆ ಹೋಗಿದ್ದೆ, ಪುನಾರಚನೆ ಕುರಿತು ಚರ್ಚೆ ಮಾಡಿದ್ದೆ ವತಿಷ್ಠರು ಸಂಪುಟ ಪುನಾರಚನೆ ಮಾಡಿ ಎಂದರು ಆದರೆ ನಾನೇ ಸರ್ಕಾರಕ್ಕೆ 2. 5ವರ್ಷ ಆಗಲಿ ನಂತರ ಮಾಡೋಣ ಎಂದಿದ್ದೆ, ಈಗ ಹೈಕಮಾಂಡ್ ಏನು ಹೇಳಲಿದೆಯೋ ಅದರಂತೆ ಮಾಡುತ್ತೇವೆ, ಸಂಪುಟ ವಿಸ್ತರಣೆ,ಪುನಾರಚನೆ ಎಂದರೆ ಅದರಂತೆ ಆಗಲಿದೆ,ನಾಯಕತ್ವ ವಿಚಾರದಲ್ಲಿ ತೀರ್ಮಾನ ಕೈಗೊಂಡರೆ ಅದರಂತೆ ಆಗಲಿದೆ ಒಟ್ಟಿನಲ್ಲಿ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ,ಹೈಕಮಾಂಡ್ ಆದೇಶ ಪಾಲನೆ ಮಾಡುತ್ತೇನೆ ಎಂದರು.
2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?
ಬಿಜೆಪಿಯವರು ಸರ್ಕಾರದ ಬಳಿ ಹಣವಿಲ್ಲ ಎನ್ನುತ್ತಾರೆ. 2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ವೆಚ್ಚ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುತ್ತಿದ್ದೇವೆ. ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳು ಬಿಟ್ಟರೆ ಬೇರೇನೂ ಹೇಳಲು ಬರುವುದಿಲ್ಲ. ಸುಳ್ಳೇ ಅವರ ಮನೆ ದೇವರು ಎಂದರು.
ನುಡಿದಂತೆ ನಡೆಸಿದ್ದೇವೆ:
ಗ್ಯಾರಂಟಿ ಯೋಜನೆಗಳಿಗೆ ಒಂದು ಲಕ್ಷ ಕೋಟಿ ರೂಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲಾಗಿದೆ. ನಾವು ನುಡಿದಂತೆ ನಡೆದ ಸರ್ಕಾರ ಎಂದು ಹೇಳಿದ್ದೆವು. ಅದರಂತೆ ನಡೆದಿದ್ದೇವೆ ಎಂದರು.

