ಬೆಂಗಳೂರು:ಪ್ರಜಾ ಪ್ರಭುತ್ವ ಮಾದರಿಯಲ್ಲಿ ನ್ಯಾಯ ಸಮ್ಮತವಾಗಿ ಚುನಾವಣೆಗಳು ನಡೆದು ಜನರಿಂದ ಬಹುಮತ ಪಡೆದ ಸರ್ಕಾರಗಳು ರಚನೆಯಾಗಿ ಆಡಳಿತ ನಡೆಸುತ್ತಿದ್ದರೂ ಚುನಾವಣಾ ಆಯೋಗದಂತಹ ಸಂವಿಧಾನಿಕ ಸಂಸ್ಥೆಗಳ ಮೇಲೆ ಆಧಾರ ರಹಿತವಾಗಿ ಓಟ್ ಚೋರಿ ಎನ್ನುವ ಆರೋಪ ಮಾಡುವ ಮೂಲಕ ಭಾರತದ ಸಂವಿಧಾನಿಕ ಸಂಸ್ಥೆಗಳ ಮೇಲೆ ತಮಗೆ ನಂಬಿಕೆ ಇಲ್ಲ ಎನ್ನುವುದನ್ನು ಸಾಬೀತು ಮಾಡಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನ ದಿನಾಚರಣೆ ಹಿನ್ನಲೆಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡರ ಮಾಡಿರುವ ಬೊಮ್ಮಾಯಿ,ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಸ್ವಾತಂತ್ರ ದೇಶವಾಗಿ ಎಪತ್ತೇಳು ವರ್ಷ ಕಳೆದರೂ ಈ ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವ ಇನ್ನೂ ಗಟ್ಟಿಯಾಗಿ ಉಳಿಯಲು ನಮ್ಮ ದೇಶ ಒಪ್ಪಿಕೊಂಡು, ಅಳವಡಿಸಿಕೊಂಡು, ಪಾಲಿಸಿಕೊಂಡು ಬರುತ್ತಿರುವ ಸಂವಿಧಾನ ಕಾರಣ.ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ನಮ್ಮ ಸಂವಿಧಾನವನ್ನು ತಿರುಚುವ ಪ್ರಯತ್ನಗಳು ನಿರಂತರ ನಡೆದಿದ್ದು, ಅಂತಹ ಪ್ರಯತ್ನಗಳಿಗೆ ದೇಶದ ಜನತೆ ತಕ್ಕ ಪಾಠ ಕಲಿಸಿ ಶಿಕ್ಷೆ ಕೊಟ್ಟಿರುವ ಉದಾಹರಣೆ ನಮ್ಮ ಇತಿಹಾಸದಲ್ಲಿ ದಾಖಲಾಗಿದೆ ಎಂದಿದ್ದಾರೆ.
1977 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ ವಾಕ್ ಸ್ವಾತಂತ್ರ್ಯ ವ್ಯಕ್ತಿ ಸ್ವಾತಂತ್ರ್ಯ, ಪತಿಕಾ ಸ್ವಾತಂತ್ರ್ಯ ಎಲ್ಲವನ್ನೂ ಕಸಿದುಕೊಂಡು ಸಂವಿಧಾನವನ್ನೇ ತಿರುಚಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿದರು. ಆದರೆ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಈ ದೇಶದ ಜನತೆ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾಗಾಂಧಿಯನ್ನು ಸೋಲಿಸಿ ನಮ್ಮ ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಅದೇ ರೀತಿ ಕೇಶವಾನಂದ ಭಾರತಿ ವರ್ಸಸ್ ಕೇರಳ ಸರ್ಕಾರದ ನಡುವಿನ ಪ್ರಕರಣದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಸಂಸತ್ತು ಸಂವಿಧಾನವನ್ನು ತಿದ್ದುಪಡಿ ಮಾಡಲು ಅಧಿಕಾರ ಹೊಂದಿದ್ದರೂ, ಸಂವಿಧಾನದ ಮೂಲ ರಚನೆ ಮತ್ತು ಅದರ ಮೂಲಭೂತ ಸ್ವರೂಪವನ್ನು ಬದಲಾಯಿಸುವಂತಿಲ್ಲ ಎಂದು ತೀರ್ಪು ನೀಡಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ತೀರ್ಪು ಸಂವಿಧಾನದ ಮೂಲಭೂತ ಸ್ವರೂಪವನ್ನು ಸಂಸತ್ತಿನ ತಿದ್ದುಪಡಿಯಿಂದ ರಕ್ಷಿಸಿತು. ಅಲ್ಲದೇ ಸಂವಿಧಾನದ ಪಾವಿತ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಈ ತೀರ್ಪು ಮಹತ್ವದ ಪಾತ್ರ ವಹಿಸಿತು ಎಂದು ದೂರಿದ್ದಾರೆ.
ಇತಿಹಾಸದುದ್ದಕ್ಕೂ ಭಾರತದ ಸಂವಿಧಾನಕ್ಕೆ ಅಪಚಾರ ಎಸಗುತ್ತ, ಸಂವಿಧಾನವನ್ನು ತಿರುಚಲು ನಿರಂತರ ಪ್ರಯತ್ನ ನಡೆಸುತ್ತ ಬಂದಿರುವ ಕಾಂಗ್ರೆಸ್ ಪಕ್ಷದ ಮುಖಂಡರು, ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎನ್ನುವ ಅಪಪ್ರಚಾರವನ್ನು ನಿರಂತರ ಮಾಡುತ್ತ ಸಂವಿಧಾನದ ಮೇಲೆ ತಾವು ಮಾಡಿರುವ ದಾಳಿಯನ್ನು ಜನರಿಂದ ದೂರ ಮಾಡುವ ಪ್ರಯತ್ನ ನಡೆಸಿದ್ದಾರೆ. ಲೋಕಸಭೆಯ ಪ್ರತಿಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿಯವರು ಹೋದಲ್ಲೆಲ್ಲಾ ಸಂವಿಧಾನ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ತಾವೇ ಸಂವಿಧಾನ ರಕ್ಷಕರು ಎನ್ನುವಂತೆ ಬಿಂಬಿಸಿಕೊಳ್ಳುತ್ತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಅದರ ಮೌಲ್ಯಗಳ ಬಗ್ಗೆ ವಿದೇಶಗಳಲ್ಲಿ ಹೋಗಿ ಅಪಪ್ರಚಾರ ಮಾಡಿ ದೇಶದ ಮರ್ಯಾದೆ ಕಳೆಯುವ ಕೆಲಸವನ್ನು ನಿರಂತರ ಮಾಡುತ್ತ ಬಂದಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವೂ ಸಂವಿಧಾನದ ಹೆಸರಿನಲ್ಲಿ ಸಂವಿಧಾನವನ್ನು ಗೌರವಿಸದೇ ಅದರ ವಿರೋಧಿ ಕೆಲಸವನ್ನು ನಿರಂತರ ಮಾಡುತ್ತ ಬಂದಿದ್ದಾರೆ. ಸಂವಿಧಾನದಲ್ಲಿ ರಾಜ್ಯ ಸರ್ಕಾರಕ್ಕೆ ಜಾತಿ ಸಮೀಕ್ಷೆ ಮಾಡುವ ಅಧಿಕಾರ ಇಲ್ಲದಿದ್ದರೂ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಜಾತಿ ಸಮೀಕ್ಷೆ ಮಾಡಿ, ಸಂವಿಧಾನದಲ್ಲಿ ಇಲ್ಲದಿರುವ ಧರ್ಮಗಳ ಹೆಸರುಗಳನ್ನು ಸೇರಿಸಿ ಸಮಾಜದಲ್ಲಿ ಧರ್ಮ ಸಂಘರ್ಷ ಉಂಟಾಗುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಕೂಡ ಭಾರತದ ಸಂವಿಧಾನವೇ ನಮ್ಮ ಧರ್ಮ ಎಂದು ಒಪ್ಪಿಕೊಂಡು ಈ ದೇಶದ ಸಂವಿಧಾನದ ಅಡಿಯಲ್ಲಿ ವಿಶ್ವವೇ ಮೆಚ್ಚುವಂತಹ ನಾಯಕತ್ವವನ್ನು ನೀಡಿ, ಭಾರತವನ್ನು ವಿಶ್ವದ ಬಲಿಷ್ಠ ದೇಶವನ್ನಾಗಿ ಮಾಡಲು ವಿಕಸಿತ ಭಾರತದ ಸಂಕಲ್ಪ ಮಾಡಿದ್ದಾರೆ. ಭಾರತದ ಬಲಿಷ್ಠ ಸಂವಿಧಾನದ ಅಡಿಯಲ್ಲಿ ಪಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನಂತೆ 2047 ಕ್ಕೆ ವಿಕಸಿತ ಭಾರತ ಆಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

