Thu. Mar 5th, 2026

ಸಿದ್ದರಾಮಯ್ಯ ಬದಲಾವಣೆ ಅನಿವಾರ್ಯವಾದರೆ ಪರಮೇಶ್ವರ್ ಮುಖ್ಯಮಂತ್ರಿಯಾಗಲಿ: ರಾಜಣ್ಣ

Share this with Friends

ತುಮಕೂರು: ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯಬೇಕು ಒಂದು ವೇಳೆ ಬದಲಾವಣೆ ಅನಿವಾರ್ಯ ಎನ್ನುವುದೇ ಆದಲ್ಲಿ ಪರಮೇಶ್ವರ್ ಅವರಿಗೆ ಅವಕಾಶ ನೀಡಬೇಕು ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ‌ ಹಸ್ತಾಂತರ ವಿಷಯದಲ್ಲಿ ಇನ್ನೆರಡು ದಿನದಲ್ಲಿ ಎಐಸಿಸಿ ನಾಯಕರೇ ಸ್ಪಷ್ಟೀಕರಣ ನೀಡಲಿದ್ದಾರೆ, ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಗೆದ್ದಿದ್ದೇವೆ.ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರೇ ಇರಬಹುದು,ಆದರೆ ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆಗೆ ಹೋಗಿದ್ದೆವು, ಈ ಹಿಂದೆ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಪಕ್ಷವನ್ನು ಅಧಿಕಾರಕ್ಕೆ ತಂದರು ಆದರೆ ಅವರು ಸೋತರು, ಡಿಕೆ ಶಿವಕುಮಾರ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಕ್ಕಾಗಿ ಕೂಲಿ ಕೇಳುತ್ತಾರಲ್ಲ ಪರಮೇಶ್ವರ್ ಅವರದು ಹಳೆಯ ಕೂಲಿ ಇದೆ, ಮೊದಲು ಹಳೆಯ ಕೂಲಿ‌ ಚುಕ್ತಾ ಆಗಲಿ ನಂತರ ಇವರ ಕೂಲಿಗೆ ಬರಲಿ ಎಂದರು.

ಮುಖ್ಯಮಂತ್ರಿಯನ್ನಾಗಿ ಸಿದ್ದರಾಮಯ್ಯರನ್ನು ಆಯ್ಕೆ ಮಾಡಿದ್ದು ಕಾಂಗ್ರೆಸ್ ಶಾಸಕಾಂಗ ಪಕ್ಷ.ಇಲ್ಲಿ ಯಾರಾದರೂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದಿದ್ದಾರಾ? ಹೇಳಿದ್ದರೆ ಹೇಳಿ, ಸುಮ್ಮನೆ ಇವೆಲ್ಲಾ ಅಂತೆ ಕಂತೆ ಅಷ್ಟೆ.30-30 ತಿಂಗಳು ಅಧಿಕಾರ ಒಪ್ಪಂದ ಎನ್ನುತ್ತಾರೆ,ಅಧಿಕೃತವಾಗಿ ಹೇಳುವವರು ಯಾರು? ಎಂದರು.

ರಾಜ್ಯದಲ್ಲಿ ನಾಯಕತ್ವದ ಬಗ್ಗೆ ಮಾತನಾಡಬಾರದು ಎಂದು ಹೈಕಮಾಂಡ್ ನವರು ಹೇಳಿದ್ದಾರೆ ಹಾಗಾಗಿ ನಾನು ಅದರ ಬಗ್ಗೆ ಮಾತನಾಡಲ್ಲ,ಆದರೆ ವೈಯಕ್ತಿಕ ಆಶಯ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿ ಇರಬೇಕು ಎನ್ನುವುದು ಅದು ಹೈಕಮಾಂಡ್ ಒಪ್ಪಿಗೆ ಮೇಲೆ ನಿರ್ಧರಿಸಲ್ಪಡಲಿದೆ ಎಂದರು.

ಈಗ ಬೇಕಾದರೆ ಡಿಕೆ ಶಿವಕುಮಾರ್ ನೇತೃತ್ವದಲ್ಲಿಯೇ ಎಲ್ಲರೂ ಚುನಾವಣೆಗೆ ಹೋಗೋಣ, ಅವರ ನೇತೃತ್ವದಲ್ಲಿಯೇ ಒಟ್ಟಾಗಿ ಕೆಲಸ ಮಾಡಿ ಬಹುಮತ ಪಡೆದು ಗೆಲ್ಲೋಣ, ಆಗ ಅವರೇ ಐದು ವರ್ಷ ಸಿಎಂ ಆಗಲಿ ಎಂದು ರಾಜಣ್ಣ ವ್ಯಂಗ್ಯವಾಡಿದರು.


Share this with Friends

Related Post