ಬೆಂಗಳೂರು:”ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿದೆ. ಮಿಕ್ಕ ಸಮಯದಲ್ಲಿ ಏನೇನು ಕೆಲಸಗಳನ್ನು ಮಾಡಬೇಕು ಎಂದು ನನ್ನ ಹಾಗು ಸತೀಶ್ ಜಾರಕಿಹೊಳಿ ಭೇಟಿಯಲ್ಲಿ ಚರ್ಚೆ ನಡೆಸಲಾಗಿದೆ. ಇದು ಬಿಟ್ಟರೆ ಮಾತುಕತೆಯಲ್ಲಿ ಬೇರೆ ವಿಶೇಷತೆ ಏನಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದ ಬಳಿ ಮಾತನಾಡಿದ ಅವರು,”ನಾನು ಪಕ್ಷದ ಅಧ್ಯಕ್ಷ, ಸತೀಶ್ ಜಾರಕಿಹೊಳಿ ಅವರು ಪಕ್ಷದ ಕಾರ್ಯಾಧ್ಯಕ್ಷರು. ಜೊತೆಗೆ ನಾವಿಬ್ಬರು ಆತ್ಮೀಯ ಸ್ನೇಹಿತರು. ಇಬ್ಬರ ಬಾಂಧವ್ಯ ಚೆನ್ನಾಗಿದೆ. ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾನು ಮತ್ತು ಸತೀಶ್ ಇಬ್ಬರೂ ಪ್ರಸ್ತುತ ಒಂದೇ ಸಂಪುಟದಲ್ಲಿ ಕೆಲಸ ಮಾಡುತ್ತಿದ್ದೇವೆ. ಸತೀಶ್ ಜಾರಕಿಹೊಳಿ ಅವರು ಪಕ್ಷದ ದೊಡ್ಡ ಆಸ್ತಿ. ನಾವು ನಮ್ಮ ಕೆಲಸ ಮುಂದುವರೆಸಿಕೊಂಡು ಹೋಗುತ್ತೇವೆ” ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ, ಡಿಸಿಎಂ ಬಣವಿದೆ ಎನ್ನುವ ಚರ್ಚೆಯ ಬಗ್ಗೆ ಕೇಳಿದಾಗ, “ನನ್ನದು ಯಾವುದೇ ಬಣವಿಲ್ಲ. ಒಂದು ಬಣವಿದೆ, ಅದು ‘ಕಾಂಗ್ರೆಸ್ ಬಣ’. ನನ್ನ ಸಂಖ್ಯೆ 140. ಸಾಮೂಹಿಕ ನಾಯಕತ್ವದಲ್ಲಿ ಈ ಪಕ್ಷವನ್ನು ಕಟ್ಟಲಾಗಿದೆ. ಪಕ್ಷಕ್ಕೆ ನಾನೊಬ್ಬನೆ ದುಡಿದಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ, ಸಿದ್ದರಾಮಯ್ಯ ಅವರು ಹಾಗೂ ಎಲ್ಲಾ ಶಾಸಕರ ಶ್ರಮದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದೇವೆ. ಇದನ್ನು ಉಳಿಸಿಕೊಂಡು ಹೋಗಬೇಕು ಎನ್ನುವ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿ ಹಾಗೂ ನಾನು ಭೇಟಿ ಮಾಡಿ ಚರ್ಚಿಸಿದ್ದೇವೆ” ಎಂದರು.
ಮುಖ್ಯಮಂತ್ರಿ ಹುದ್ದೆ ಮುಖ್ಯವಲ್ಲ:
“ಮುಖ್ಯಮಂತ್ರಿ ಹುದ್ದೆ ಅಥವಾ ಉನ್ನತ ಅಧಿಕಾರ ಮುಖ್ಯವಲ್ಲ. ಪಕ್ಷದ ಎಲ್ಲರೊಡನೆ ಒಟ್ಟಾಗಿ ಕೆಲಸ ಮಾಡಿ, ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವುದು ಮುಖ್ಯ” ಎಂದರು.
ಸೂಕ್ತ ಸಮಯದಲ್ಲಿ ಪಕ್ಷ ತೀರ್ಮಾನ ಮಾಡಲಿದೆ:
ನಿಮಗೆ ನಾಯಕತ್ವ ನೀಡಬೇಕು ಎಂದು ದೆಹಲಿಗೆ ಒಂದಷ್ಟು ಜನ ಶಾಸಕರು ತೆರಳಿ ಹೈಕಮಾಂಡ್ ಭೇಟಿಗೆ ಪ್ರಯತ್ನಿಸಿದ್ದಾರೆ ಹಾಗೂ ಮರಳಿ ಬಂದಿದ್ದಾರೆ ಎನ್ನುವ ಬಗ್ಗೆ ಕೇಳಿದಾಗ, “ನನಗೆ ಇದರ ಬಗ್ಗೆ ಗೊತ್ತಿಲ್ಲ. ಮುಖ್ಯಮಂತ್ರಿಯವರು ಸಂಪುಟ ಪುನರ್ ರಚನೆ ಮಾಡಲಾಗುವುದು ಎಂದಿದ್ದಾರೆ. ಎಲ್ಲರಿಗೂ ಮಂತ್ರಿಯಾಗಬೇಕು ಎನ್ನುವ ಆಸೆ ಇರುತ್ತದೆ. ಆದ ಕಾರಣಕ್ಕೆ ಹೋಗಿದ್ದಾರೆ. ಇದರಲ್ಲಿ ತಪ್ಪೇನಿದೆ. ಸಚಿವ ಸ್ಥಾನದ ಆಕಾಂಕ್ಷೆ ಇರುವುದರ ಬಗ್ಗೆ ನಾನು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ನನ್ನ ಪರವಾಗಿ ಯಾರೂ ಮಾತನಾಡುವುದು ಬೇಡ. ಪಕ್ಷ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಣಯ ಕೈಗೊಳ್ಳಲಿದೆ. ಅಧಿಕಾರದ ಬಗ್ಗೆ ಏನೇ ಚರ್ಚೆಯಗಿದ್ದರೂ ಅದು ನಾಲ್ಕು ಗೋಡೆಗಳ ಮಧ್ಯೆ ಆಗಿದೆ. ಅದನ್ನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ” ಎಂದರು.
“ಮುಖ್ಯಮಂತ್ರಿ ಹುದ್ದೆ, ಅಧಿಕಾರ ಹಸ್ತಾಂತರ ಈ ಎಲ್ಲದರ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು, ಸೋನಿಯಾ ಗಾಂಧಿ ಅವರು, ರಾಹುಲ್ ಗಾಂಧಿ ಅವರು ಸೇರಿದಂತೆ ಪಕ್ಷದ ಹಿರಿಯ ನಾಯಕರು ಚರ್ಚೆ ನಡೆಸುತ್ತಾರೆ. ಅವರುಗಳು ಸೂಕ್ತ ತೀರ್ಮಾನ ಮಾಡುತ್ತಾರೆ” ಎಂದರು.
ಪಕ್ಷ ನನ್ನ ಹಿತ ಕಾಯಲಿದೆ:
ಸದಾನಂದಗೌಡ ಅವರು ಸೇರಿದಂತೆ ಇತರೇ ಪಕ್ಷಗಳ ನಾಯಕರು ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಕೇಳಿದಾಗ, “ಬಿಜೆಪಿ ಹಾಗೂ ಜನತಾದಳದ ನಾಯಕರು ನಮ್ಮ ಪಕ್ಷದ ವಿಚಾರವನ್ನು ಬಹಿರಂಗವಾಗಿ ಮಾತನಾಡುವ ಅವಶ್ಯಕತೆಯಿಲ್ಲ. ಅವರು ತಮ್ಮ ಪಕ್ಷದಲ್ಲಿರುವ ಸಮಸ್ಯೆಗಳ ನ್ನು ನೋಡಿಕೊಳ್ಳಲಿ. ಪಕ್ಷ ನನ್ನ ಹಿತ ಕಾಯಲಿದೆ. ನನ್ನ ಕಷ್ಟ ಕಾಲದಲ್ಲಿ ಪಕ್ಷ ನನ್ನ ಬೆನ್ನಿಗೆ ನಿಂತಿದೆ. ವಿರೋಧ ಪಕ್ಷದವರು ನನ್ನ ಬಗ್ಗೆ ಕಾಳಜಿವಹಿಸುವುದು ಬೇಡ. ನಾನು ಅಪ್ಪಟ ಕಾಂಗ್ರೆಸ್ಸಿಗ” ಎಂದರು.
ಒಕ್ಕಲಿಗನಾಗಿ ಹುಟ್ಟಿದ್ದೇನೆ:
ನೀವು ಒಕ್ಕಲಿಗರ ನಾಯಕರಲ್ಲ ಎಂದು ಆರ್.ಅಶೋಕ್ ಅವರು ಹೇಳಿರುವ ಬಗ್ಗೆ ಕೇಳಿದಾಗ, “ನಾನು ಒಕ್ಕಲಿಗರ ನಾಯಕ ಎಂದು ಯಾವಾಗ ಹೇಳಿದ್ದೇನೆ? ನಾನು ಕಾಂಗ್ರೆಸ್ ಪಕ್ಷದ ನಾಯಕ. ಒಕ್ಕಲಿಗನಾಗಿ ಹುಟ್ಟಿದ್ದೇನೆ ಅಷ್ಟೇ. ಇದರಲ್ಲಿ ಅನುಮಾನವಿಲ್ಲ. ನಾವು ಬಿಟ್ಟರು ಧರ್ಮ ಮತ್ತು ಜಾತಿ ನಮ್ಮನ್ನು ಬಿಡುವುದಿಲ್ಲ” ಎಂದರು.
“ಅಶೋಕ್ ಅವರೇ ಒಕ್ಕಲಿಗರ ನಾಯಕ ಪದ ತೆಗೆದುಕೊಂಡು, ಬ್ಯಾಡ್ಜ್ ಹಾಕಿಕೊಂಡಿದ್ದಾರೆ. ನಾನೇ ಅವರಿಗೆ ಒಕ್ಕಲಿಗ ನಾಯಕ ಬ್ಯಾಡ್ಜ್ ಕಳಿಸಿಕೊಡುತ್ತೇನೆ. ಅದನ್ನು ಅಶೋಕಣ್ಣ ಹಾಕಿಕೊಳ್ಳಲಿ. ಚಕ್ರವರ್ತಿ, ಸಾಮ್ರಾಟ್ ಅಶೋಕ್ ಎನ್ನುವ ಒಳ್ಳೆ ಪದವಿ ಅಶೋಕಣ್ಣನಿಗೆ ಇದೆ” ಎಂದು ವ್ಯಂಗ್ಯವಾಡಿದರು.
ನೀವು ಮತ್ತು ಸಿದ್ದರಾಮಯ್ಯ ಅವರು ಜೋಡೆತ್ತುಗಳಂತೆ ಪಕ್ಷವನ್ನು ಅಧಿಕಾರಕ್ಕೆ ತಂದವರು. ನಿಮ್ಮ ಶ್ರಮಕ್ಕೆ ಫಲ ಸಿಗಲಿದೆಯೇ ಎಂದು ಕೇಳಿದಾಗ, “ಈಗ ಇಬ್ಬರೂ ಜೊತೆಯಲ್ಲೇ ಸರ್ಕಾರ ನಡೆಸುತ್ತಿದ್ದೇವಲ್ಲ. ಎಲ್ಲರೂ ಒಟ್ಟಿಗೆ ಸರ್ಕಾರ ತೆಗೆದುಕೊಂಡು ಹೋಗುತ್ತಿದ್ದೇವೆ. ಜನರಿಗೆ ಏನು ಬೇಕೋ ಅದೆಲ್ಲವನ್ನೂ ಕೊಡುತ್ತಿದ್ದೇವಲ್ಲ” ಎಂದರು.

