Fri. Mar 6th, 2026

ಇ-ಸ್ವತ್ತು ಮೂಲಕ ನಿಮ್ಮ ಆಸ್ತಿ ದಾಖಲೆ ಸರಿಪಡಿಸಿಕೊಳ್ಳಿ: ಡಿಸಿಎಂ

Share this with Friends

ಬೆಂಗಳೂರು:ನಿಮ್ಮ ಮನೆ ಬಾಗಿಲಿಗೆ ಇ-ಸ್ವತ್ತು ತಂದುಕೊಡುವ ಕೆಲಸ ಮಾಡುತ್ತಿದ್ದೇವೆ. ಇದು ನಿಮ್ಮೆಲ್ಲರ ಬದುಕಿಗೆ ಹೊಸರೂಪ ನೀಡಿ, ಎಲ್ಲ ಪಂಚಾಯ್ತಿ ಆಸ್ತಿ ದಾಖಲೆಗಳಿಗೆ 11 ಬಿ ಖಾತೆಗಳನ್ನು ನೀಡಲಾಗುತ್ತಿದೆ.11 ಬಿ ಮೂಲಕ ತೆರಿಗೆ ಪಾವತಿಸಿ, ಆಸ್ತಿ ದಾಖಲೆ ಸರಿಪಡಿಸಿಕೊಳ್ಳಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ನಿಮ್ಮ ಮನೆ ಬಾಗಿಲಿಗೆ ಇ-ಸ್ವತ್ತು ತಂದುಕೊಡುವ ಕೆಲಸ ಮಾಡುತ್ತಿದ್ದೇವೆ. ಇದು ನಿಮ್ಮೆಲ್ಲರ ಬದುಕಿಗೆ ಹೊಸರೂಪ ನೀಡಿ, ಎಲ್ಲ ಪಂಚಾಯ್ತಿ ಆಸ್ತಿ ದಾಖಲೆಗಳಿಗೆ 11 ಬಿ ಖಾತೆಗಳನ್ನು ನೀಡಲಾಗುತ್ತಿದೆ. ನೀವು ಅರ್ಜಿ ಹಾಕಿ 15 ದಿನದ ಒಳಗೆ ಖಾತೆ ನೀಡಲು ಸರ್ಕಾರ ತೀರ್ಮಾನಿಸಿದೆ. ಯಾರೂ ಕಚೇರಿ ಅಲೆಯುವುದು ಬೇಡ ಎಂದು ಆನ್ಲೈನ್ ಹಾಗೂ ಬಾಪುಜಿ ಕೇಂದ್ರಗಳಲ್ಲಿ ವಿತರಣೆಗೆ ಅವಕಾಶ ನೀಡಲಾಗಿದೆ. 11 ಬಿ ಮೂಲಕ ತೆರಿಗೆ ಪಾವತಿಸಿ, ಆಸ್ತಿ ದಾಖಲೆ ಸರಿಪಡಿಸಿಕೊಳ್ಳಿ” ಎಂದು ತಿಳಿಸಿದರು.

ಭೂ ದಾಖಲೆ ನೀಡುವುದು ಸರ್ಕಾರದ ಆರನೇ ಗ್ಯಾರಂಟಿ:

“ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಉಳುವವನಿಗೆ ಭೂಮಿ, ಬಗರ್ ಹುಕುಂ ಸಾಗುವಳಿ ಜಮೀನು ಸಕ್ರಮ ಮಾಡಿದೆ. ಅರಣ್ಯ ಪ್ರದೇಶದಲ್ಲೂ ವಾಸಿಸುವವರಿಗೆ ಕಾನೂನಿನ ಅಡಿಯಲ್ಲಿ ಸಹಾಯ ಮಾಡಿದೆ. ನಿಮ್ಮ ಭೂಮಿ ಹಾಗೂ ಆಸ್ತಿ ದಾಖಲೆ ಸರಿಪಡಿಸುವುದು ನಮ್ಮ ಆರನೇ ಗ್ಯಾರಂಟಿ ಯೋಜನೆಯಾಗಿದೆ. ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳನ್ನು ಇ ಖಾತಾ ಅಭಿಯಾನ ಮಾಡಿದ್ದು, 6 ಲಕ್ಷ ಜನರಿಗೆ ಇ ಖಾತಾ ವಿತರಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಕೃಷ್ಣ ಬೈರೇಗೌಡರು ಹಾಗೂ ಪ್ರಿಯಾಂಕ್ ಖರ್ಗೆ ಅವರು ಸೇರಿ 1,11,111 ಜನರಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಿಂದ ಹೊರಗಿರುವ ತಾಂಡಾಗಳನ್ನು ಸಕ್ರಮ ಮಾಡಿ ಹಕ್ಕುಪತ್ರ, ಭೂ ದಾಖಲೆಗಳನ್ನು ವಿತರಿಸಿದ್ದೇವೆ” ಎಂದು ವಿವರಿಸಿದರು.

ನನ್ನ ಕೆಲಸ ನೋಡಿ ಬಿಜೆಪಿ, ಕೇಂದ್ರ ಸರ್ಕಾರ ಗಾಬರಿಯಾಗಿತ್ತು:

“ನರೇಗಾ ಯೋಜನೆಯಲ್ಲಿ ನನ್ನ ಕ್ಷೇತ್ರದಲ್ಲಿ 250 ಕೋಟಿಯಷ್ಟು ಕೆಲಸ ಮಾಡಿಸಿದ್ದೆ. ಇದನ್ನು ನೋಡಿ ಎಲ್ಲರೂ ಗಾಬರಿಯಾದರು. ಬಿಜೆಪಿ, ಕೇಂದ್ರ ಸರ್ಕಾರ ನಾನು ಹಣ ಲೂಟಿ ಮಾಡಿದ್ದೇನೆ, ಸುಳ್ಳು ಲೆಕ್ಕ ಕೊಟ್ಟಿದ್ದೇನೆ ಎಂದು ತಂಡಗಳನ್ನು ಕಳುಹಿಸಿ ಅನೇಕ ಕಡೆ ತನಿಖೆ ಮಾಡಿಸಿತು. ನಾನು 60-70 ಸಾವಿರ ಮನೆಗಳಿಗೆ ನರೇಗಾ ಯೋಜನೆ ಮೂಲಕ ಜಮೀನು ಮಟ್ಟ, ದನದ ಕೊಟ್ಟಿಗೆ, ಕೋಳಿ ಸಾಕಾಣೆ, ಆಶ್ರಯ ಮನೆ, ಇಂಗುಗುಂಡಿ, ಪಂಚಾಯ್ತಿ ಕಚೇರಿ, ಪಾರ್ಕ್ ನಿರ್ಮಾಣ ಹೀಗೆ ಏನೆಲ್ಲಾ ವ್ಯವಸ್ಥೆ ಇದೆ ಅದನ್ನು ಮಾಡಿದ್ದೆವು. ಕುರಿ ಶೆಡ್ ಕಟ್ಟಲು 30-40 ಸಾವಿರ ನೆರವು ನೀಡಿದ್ದೆ. ಕೋವಿಡ್ ಸಮಯದಲ್ಲಿ ಪಂಚಾಯ್ತಿಯವರನ್ನು ಬಳಸಿಕೊಂಡು ಪ್ರತಿ ಕುಟುಂಬಕ್ಕೆ 10 ಸಾವಿರ ವೆಚ್ಚದ ಆಹಾರ ಸಾಮಗ್ರಿ ವಿತರಣೆ ಮಾಡಿದ್ದೆವು. ಇದಕ್ಕೆ ಮಾಜಿ ಮುಖ್ಯಮಂತ್ರಿಯೊಬ್ಬರು ನಮ್ಮ ಜಿಲ್ಲಾಧಿಕಾರಿ ಮೇಲೆ ದೂರು ನೀಡುತ್ತಿದ್ದರು. ಆಗ ನಾನು ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ, ಕಾನೂನು ಪುಸ್ತಕ ತೆಗೆದು ನೋಡು. ನಮ್ಮ ಹಣದಲ್ಲಿ ಪಂಚಾಯ್ತಿ ತೀರ್ಮಾನ ಮಾಡಿದೆ ಎಂದು ಹೇಳಿದೆ. ಈ ಯೋಜನೆ ಜಾರಿ ಮಾಡಿದ್ದಕ್ಕೆ ನಮ್ಮ ತಾಲೂಕಿಗೆ ಪ್ರಶಸ್ತಿ ನೀಡಿದರು. ನನಗೆ ಪ್ರಶಸ್ತಿ ನೀಡಬೇಕಾಗುತ್ತದೆ ಎಂದು ನಮ್ಮ ತಾಲೂಕು ಪಂಚಾಯ್ತಿ ಅಧ್ಯಕ್ಷನಿಗೆ ಪ್ರಶಸ್ತಿ ನೀಡಿದರು” ಎಂದು ತಿಳಿಸಿದರು.

“ನಾನು ರಾಜ್ಯಶಾಸ್ತ್ರ ವಿಷಯದಲ್ಲಿ ಎಂಎ ಪದವಿ ಪಾಸ್ ಮಾಡಿದ್ದೇ 2007-08ರಲ್ಲಿ. ಅದರಲ್ಲಿ ಸ್ಥಳೀಯ ಸಂಸ್ಥೆಗಳ ಬಗ್ಗೆ ಉತ್ತರ ಪತ್ರಿಕೆಯಲ್ಲಿ ನನ್ನ ಅನುಭವದ ಮೇಲೆ ಉತ್ತರಿಸಿದ್ದೆ. ಆ ಪತ್ರಿಕೆಯಲ್ಲಿ ನನಗೆ ಹೆಚ್ಚು ಅಂಕ ಬಂದಿದೆ ಎಂದು ಪ್ರಾಧ್ಯಾಪಕರು ಹೇಳುತ್ತಿದ್ದರು. ನೀವುಗಳು ಕಾನೂನು ತಿಳಿಯಬೇಕು. ಕಾನೂನು ಬಿಟ್ಟು ಕೆಲಸ ಮಾಡಬೇಡಿ. ಈ ರೀತಿ ಮಾಡಿದವರು ಪ್ರಕರಣದಲ್ಲಿ ಸಿಲುಕಿ ಕೋರ್ಟ್ ಕೇಸ್ ಗಳಲ್ಲಿ ಸಿಲುಕಿ ಅಲೆಯುತ್ತಿದ್ದಾರೆ. ನಿನ್ನನ್ನು ನೀನು ನಿಯಂತ್ರಿಸಬೇಕಾದರೆ ನಿನ್ನ ಮೆದುಳು ಪ್ರಯೋಗಿಸು, ನೀನು ಬೇರೆಯವರನ್ನು ನಿಯಂತ್ರಿಸಬೇಕಾದರೆ ನಿಮ್ಮ ಹೃದಯ ಪ್ರಯೋಗಿಸು ಎಂದು ಮಹಾತ್ಮಾ ಗಾಂಧಿ ಅವರು ಹೇಳಿದ್ದಾರೆ. ನೀವುಗಳು ಪ್ರೀತಿಯಿಂದ ಜನರ ಸೇವೆ, ಜನರ ಕೆಲಸ ಮಾಡಿ” ಎಂದು ಸಲಹೆ ನೀಡಿದರು.

“ಕೇಂದ್ರ ಸರ್ಕಾರವು ನರೇಗಾ, ಜಲ ಜೀವನ್ ಮಿಷನ್ ಸೇರಿದಂತೆ ಇತರೆ ಯೋಜನೆಗಳ ವಿಚಾರದಲ್ಲಿ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು.“ಜಲಜೀವನ್ ಮಿಷನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತಲಾ 45% ಅನುದಾನ ನೀಡಬೇಕು. 10% ಹಣವನ್ನು ಜನರಿಂದ ಪಡೆಯುವುದಾಗಿದೆ. ಕಳೆದ ವರ್ಷ ಈ ಯೋಜನೆಗೆ ರಾಜ್ಯ ಸರ್ಕಾರ 3700 ಕೋಟಿ ರೂ. ಅನ್ನು ನೀಡಿದರೆ, ಕೇಂದ್ರ ಸರ್ಕಾರ ನೀಡಿರುವ ಅನುದಾನ ಈವರೆಗೂ ಶೂನ್ಯ” ಎಂದು ತಿಳಿಸಿದರು.“ಗ್ರಾಮೀಣಾಭಿವೃದ್ಧಿ ಇಲಾಖೆಯ 25 ಸಾವಿರ ಕೋಟಿ ಅನುದಾನದಲ್ಲಿ ಜಲಜೀವನ್ ಮಿಷನ್ ಗೆ 12 ಸಾವಿರ ಕೋಟಿ, ನರೇಗಾ ಯೋಜನೆಗೆ 2,400 ಕೋಟಿ, ಗ್ರಾಮಗಳ ರಸ್ತೆಗೆ 1,000 ಕೋಟಿ, ಸಿಎಂ ಮೂಲಭೂತ ಸೌಕರ್ಯಕ್ಕೆ 900 ಕೋಟಿ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲ್ಯಾಣ ಪಥ ಯೋಜನೆ ಜಾರಿ ಮಾಡಿದ್ದಾರೆ” ಎಂದರು.


Share this with Friends

Related Post