Thu. Mar 5th, 2026

ದೆಹಲಿ ಭೇಟಿಯ ಖರ್ಚುವೆಚ್ಚ ನೋಡಿಕೊಳ್ಳುತ್ತೇನೆ,ಧರಣಿ ಬಿಟ್ಟು ಮಾತುಕತೆಗೆ ಬನ್ನಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಡಿಕೆ ಮನವಿ

Share this with Friends

ನವದೆಹಲಿ:ನೀವು ಬಂದು ಹೋಗುವ ವಿಮಾನಯಾನ ವೆಚ್ಚ ಹಾಗೂ ದೆಹಲಿಯಲ್ಲಿ ವಸತಿ ವ್ಯವಸ್ಥೆಯನ್ನು ನಾನೇ ಕಲ್ಪಿಸುತ್ತೇನೆ,ಸಂಬಂಧಪಟ್ಟ‌ ಸಚಿವರೊಂದಿಗೆ ಮಾತುಕತೆಗೆ ವೇದಿಕೆ ಕಲ್ಪಿಸುತ್ತೇನೆ ಕೂಡಲೇ ಚಳಿಯಲ್ಲಿ ನಡೆಸುತ್ತಿರುವ ಧರಣಿ ಕೈಬಿಡಿ ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಡ್ಯದಲ್ಲಿ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಜತೆ ನವದೆಹಲಿಯಿಂದ ದೂರವಾಣಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ,ಸಮಸ್ಯೆ ಪರಿಹಾರ ಸಂಬಂಧ ಮಾತುಕತೆಗೆ ಬರುವಂತೆ ನವದೆಹಲಿಗೆ ಆಹ್ವಾನಿಸಿದರು.ಜಿಲ್ಲಾಧಿಕಾರಿ ಕುಮಾರ ಅವರ ಮೂಲಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿ ಶ್ರೀಕುಮಾರಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು; ನೀವು ಚಳಿಯಲ್ಲಿ ರಸ್ತೆಯಲ್ಲಿ ಧರಣಿ ಕೂರುವುದು ಬೇಡ. ನಿಮ್ಮ ಸಂಘದ ಪ್ರತಿನಿಧಿಗಳಲ್ಲಿ ಹತ್ತು ಜನ ಪ್ರಮುಖರು ನವದೆಹಲಿಗೆ ಬನ್ನಿ. ನಾನೇ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಜತೆ ಸಭೆ ಏರ್ಪಾಡು ಮಾಡಿಸುತ್ತೇನೆ. ನಾನೂ ನಿಮ್ಮ ಜತೆ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ. ಧರಣಿಯನ್ನು ಕೊನೆಗೊಳಿಸಿ ದೆಹಲಿಗೆ ಬನ್ನಿ ಎಂದು ಮನವಿ ಮಾಡಿದರು.

ನೀವು ಬಂದು ಹೋಗುವ ವಿಮಾನಯಾನ ವೆಚ್ಚ ಹಾಗೂ ದೆಹಲಿಯಲ್ಲಿ ವಸತಿ ವ್ಯವಸ್ಥೆಯನ್ನು ನಾನೇ ಕಲ್ಪಿಸುವೆ. ತಾಯಂದಿರು ಚಳಿಯಲ್ಲಿ ಬೀದಿಯಲ್ಲಿ ಇರುವುದು ಬೇಡ. ದಯಮಾಡಿ ಚರ್ಚೆಗೆ ಬನ್ನಿ ಎಂದು ಸಚಿವರು ವಿನಂತಿಸಿದರು.ಸಚಿವರ ಮಾತಿಗೆ ಸ್ಪಂದಿಸಿದ ಶ್ರೀಕುಮಾರಿ ಅವರು, ಈ ಬಗ್ಗೆ ಸಂಘದ ಪದಾಧಿಕಾರಿಗಳ ಜತೆ ಚರ್ಚೆ ನಡೆಸಿ ತಮಗೆ ತಿಳಿಸುವುದಾಗಿ ಹೇಳಿದರು.

ದೂರವಾಣಿ ಮಾತುಕತೆ ನಡೆಸುವಾಗ ಅಂಗನವಾಡಿ ಕಾರ್ಯಕರ್ತೆಯರ ಜತೆ ಮಂಡ್ಯ ಜಿಲ್ಲಾಧಿಕಾರಿ ಕುಮಾರ ಅವರೂ ಹಾಜರಿದ್ದರು.


Share this with Friends

Related Post