Thu. Mar 5th, 2026

ಪರಿಸರ ಮಾಲಿನ್ಯ ತಡೆಗಟ್ಟಲು ಇರುವ ದಾರಿ ಕುರಿತು ಸಂಶೋಧನೆ: ದಿನೇಶ್ ಗುಂಡೂರಾವ್

Share this with Friends

ಬೆಂಗಳೂರು: ಪರಿಸರ ಮಾಲಿನ್ಯ ತಡೆಗಟ್ಟಲು ಇರುವ‌ ಸಮಸ್ಯೆ-ಸವಾಲುಗಳೇನು? ಅಂತಿಮವಾಗಿ ಇರುವ ದಾರಿಗಳೇನು? ಎಂಬುದನ್ನು ಹೇಳಲು ಜಿಕೆವಿಕೆ ಸಂಶೋಧನಾ ತಂಡ ಶ್ರಮಿಸುತ್ತಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಕೂಡ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಂಗಳೂರಿನ ಜಿ.ಕೆ.ವಿ.ಕೆ. ಕಾಲೇಜು ಕ್ಯಾಂಪಸ್‌ನಲ್ಲಿ ಸಿ-ಕ್ಯಾಂಪ್‌ ಸಂಸ್ಥೆ ಆಯೋಜಿಸಿದ್ದ ‘ಪರಿಸರ ಮಾಲಿನ್ಯ ನಿಯಂತ್ರಣ ದಿನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು,ಹವಾಮಾನ ವೈಪರಿತ್ಯದಿಂದಾಗಿ  ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಇಂದಿನ ಪೀಳಿಗೆ ಎದುರಿಸುವಂತಾಗಿದೆ.ಕಾಡು ಕಡಿತ- ನಗರ ಪ್ರದೇಶ ವಿಸ್ತರಣೆಗಾಗಿ ಪರಿಸರ ನಾಶವಾಗುತ್ತಿದೆ. ಇದರಿಂದ ಹವಾಮಾನ ವೈಪರಿತ್ಯ ಉಂಟಾಗಿ ಜನರ ದೈನಂದಿನ ಬದುಕು .ಮತ್ತು ಜೀವನ ಶೈಲಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದರು.

ಉತ್ತಮ ಗಾಳಿ-ನೀರು-ಆಹಾರ ಇವು ಆರೋಗ್ಯಕರ ಸಮಾಜಕ್ಕೆ ಅವಶ್ಯಕವಾಗಿರುವ ಜೀವಾಧಾರಕಗಳು. ಒಂದು ವೇಳೆ, ಇವುಗಳೆಲ್ಲ ಸಂಪೂರ್ಣ ಮಲಿನಗೊಂಡರೆ ಅದರ ಅಪಾಯಗಳು ದೀರ್ಘಕಾಲದ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಹಾಗಾಗಿ ವಿಜ್ಞಾನ-ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಎಲ್ಲ ಬಗೆಯ ಅದರಲ್ಲೂ ಪರಿಸರ ಮಾಲಿನ್ಯ ನಿಯಂತ್ರಿಸಲು ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ ಎಂದು ವಿವರಿಸಿದರು.

ಪರಿಸರ ಸಂರಕ್ಷಣೆ ಸಂಬಂಧ ಹಲವು ಸಂಶೋಧನೆಗಳು ನಡೆಯುತ್ತಿದ್ದು, ಅಂತಿಮವಾಗಿ ಅವುಗಳನ್ನು ಹೇಗೆ ಅನುಷ್ಠಾನ ಮಾಡುತ್ತೇವೆ ಅನ್ನೋದು ನಿರ್ಣಾಯಕವಾಗಿರುತ್ತದೆ. ಯಾಕೆಂದರೆ, ಜನರ ಅಭ್ಯಾಸಗಳು, ಈಗಾಗಲೇ ವಾತಾವರಣ ಇರುವ ರೀತಿಗಳ ಕಾರಣಕ್ಕೆ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಯಲ್ಲಿ ಸಂಶೋಧನೆಯಲ್ಲಿ ಕಂಡುಕೊಂಡ ಮಾದರಿಗಳನ್ನು ಅನುಷ್ಠಾನ ಮಾಡುವಲ್ಲಿ ಹೆಚ್ಚಿನ ಸವಾಲುಗಳು ಬರುತ್ತವೆ. ಹಾಗಾಗಿ ಬುದ್ಧಿಜೀವಿಗಳು, ಪರಿಣಿತರು, ಅನುಭವಿಗಳು ಹಾಗೂ ಸಾರ್ವಜನಿಕ ಸಹಭಾಗಿತ್ವ ಆದಾಗ ಖಂಡಿತವಾಗಿ ಸವಾಲುಗಳನ್ನು ದಾಟಿ ಆರೋಗ್ಯಕರ ಪರಿಸರ ವ್ಯವಸ್ಥೆ ನಿರ್ಮಿಸಬಹುದು ಎಂದರು.

ಪರಿಸರ ಮಾಲಿನ್ಯ ತಡೆಗಟ್ಟಲು ಇರುವ‌ ಸಮಸ್ಯೆ-ಸವಾಲುಗಳೇನು? ಅಂತಿಮವಾಗಿ ಇರುವ ದಾರಿಗಳೇನು? ಎಂಬುದನ್ನು ಹೇಳಲು ಜಿಕೆವಿಕೆ ಸಂಶೋಧನಾ ತಂಡ ಶ್ರಮಿಸುತ್ತಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಕೂಡ ಎಲ್ಲ ರೀತಿಯ ಸಹಕಾರ ನೀಡಲಿದೆ.ಒಟ್ಟಾರೆಯಾಗಿ ನಾವು ನಮ್ಮ ಪರಿಸರ ರಕ್ಷಣೆಗೆ ವೈಯಕ್ತಿಕ ಪಾಲುದಾರಿಕೆಯೂ ಬೇಕು, ಅದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.


Share this with Friends

Related Post